ADVERTISEMENT

ಖಾಸಗಿ ಸ್ವತ್ತು ಸಮುದಾಯದ್ದಲ್ಲ: ಸುಪ್ರೀಂ ಕೋರ್ಟ್‌ನಿಂದ 7:2ರ ಬಹುಮತದ ತೀರ್ಪು

​ಪ್ರಜಾವಾಣಿ ವಾರ್ತೆ
ಪಿಟಿಐ
Published 6 ನವೆಂಬರ್ 2024, 0:02 IST
Last Updated 6 ನವೆಂಬರ್ 2024, 0:02 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ಖಾಸಗಿ ಒಡೆತನದಲ್ಲಿರುವ ಎಲ್ಲ ಸಂಪನ್ಮೂಲಗಳನ್ನು ಸಾರ್ವಜನಿಕ ಬಳಕೆಗಾಗಿ ಸರ್ಕಾರ ಸ್ವಾಧೀನಪಡಿಸಿಕೊಳ್ಳುವಂತಿಲ್ಲ. ಆದರೆ, ಸಮುದಾಯದ ವಶದಲ್ಲಿರುವ ಭೌತಿಕ ರೂಪದ ಸಂಪನ್ಮೂಲಗಳನ್ನು ಜನಸಮೂಹದ ಒಳಿತಿಗಾಗಿ ಸ್ವಾಧೀನಕ್ಕೆ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು 7:2ರ ಬಹುಮತದ ತೀರ್ಪನ್ನು ಮಂಗಳವಾರ ನೀಡಿದೆ.

ಖಾಸಗಿ ಒಡೆತನದಲ್ಲಿರುವ ಎಲ್ಲ ಸ್ವತ್ತುಗಳನ್ನು ಸಮುದಾಯದ ಭೌತಿಕ ಸಂಪತ್ತು ಎಂಬುದಾಗಿ ಪರಿಗಣಿಸಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪೀಠ ಹೇಳಿದೆ.

‘ಈ ವಿಚಾರವಾಗಿ, ಕರ್ನಾಟಕ ಸರ್ಕಾರ ವರ್ಸಸ್ ರಂಗನಾಥ ರೆಡ್ಡಿ ಪ್ರಕರಣದಲ್ಲಿ (1977) ನ್ಯಾಯಮೂರ್ತಿ ಕೃಷ್ಣ ಅಯ್ಯರ್ ನೇತೃತ್ವದ ಪೀಠವು  ನೀಡಿದ್ದ ತೀರ್ಪು ನಿರ್ದಿಷ್ಟವಾದ ಆರ್ಥಿಕ ಮತ್ತು ಸಮಾಜವಾದಿ ಸಿದ್ಧಾಂತದಿಂದ ಪ್ರೇರಿತವಾಗಿತ್ತು’ ಎಂದು ಪೀಠ ಅಭಿಪ್ರಾಯಪಟ್ಟಿದೆ.

ADVERTISEMENT

‘ಖಾಸಗಿ ಒಡೆತನದಲ್ಲಿರುವ ಎಲ್ಲ ಸಂಪನ್ಮೂಲಗಳನ್ನು ಸರ್ಕಾರ ಸ್ವಾಧೀನಕ್ಕೆ ಪಡೆದುಕೊಳ್ಳಬಹುದು’ ಎಂದು ನ್ಯಾಯಮೂರ್ತಿ ಅಯ್ಯರ್‌ ನೇತೃತ್ವದ ಪೀಠವು ಆಗ ತೀರ್ಪು ನೀಡಿತ್ತು.

ಪೀಠದಲ್ಲಿದ್ದ ಇತರ ನ್ಯಾಯಮೂರ್ತಿಗಳಾದ ಹೃಷಿಕೇಶ್‌ ರಾಯ್‌, ಜೆ.ಬಿ.ಪರ್ದೀವಾಲಾ, ಮನೋಜ್‌ ಮಿಶ್ರಾ, ರಾಜೇಶ್‌ ಬಿಂದಲ್, ಸತೀಶ್ಚಂದ್ರ ಶರ್ಮಾ ಹಾಗೂ ಆಗಸ್ಟಿನ್ ಜಾರ್ಜ್‌ ಮಸೀಹ್‌ ಅವರ ಪರವಾಗಿ ಬಹುಮತದ ತೀರ್ಪನ್ನು ಸಿಜೆಐ ಚಂದ್ರಚೂಡ್‌ ಬರೆದಿದ್ದಾರೆ.

ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನಾ ಹಾಗೂ ಸುಧಾಂಶು ಧುಲಿಯಾ ಅವರು ಭಿನ್ನತೀರ್ಪು ನೀಡಿದ್ದಾರೆ.

‘ಸಂವಿಧಾನದ 39(ಬಿ) ವಿಧಿಯಲ್ಲಿ ಉಲ್ಲೇಖಿಸಿರುವಂತೆ, ‘ಸಮುದಾಯದ ಭೌತಿಕ ಸಂಪತ್ತು’ ಎಂಬ ಪದವು ಖಾಸಗಿ ಒಡೆತನದಲ್ಲಿರುವ ಸಂಪನ್ಮೂಲಗಳನ್ನು ಒಳಗೊಂಡಿದೆಯೇ ಎಂಬ ಪ್ರಶ್ನೆ ನ್ಯಾಯಪೀಠದ ಮುಂದಿದೆ. ಹೌದು ಎಂಬುದು ಈ ಪ್ರಶ್ನೆಗೆ ಸೈದ್ಧಾಂತಿಕವಾಗಿ ನೀಡುವ ಉತ್ತರವಾಗಿದೆ. ಈ ಪದವು ಖಾಸಗಿ ಒಡೆತನದ ಸಂಪನ್ಮೂಲಗಳನ್ನೂ ಒಳಗೊಳ್ಳುತ್ತದೆ’ ಎಂದು ಪೀಠವು ಬಹುಮತದ ತೀರ್ಪಿನಲ್ಲಿ ಹೇಳಿದೆ.

‘ಖಾಸಗಿ ಒಡೆತನದ ಸಂಪನ್ಮೂಲ ಕೂಡ ಸಮುದಾಯದ ಭೌತಿಕ ಸಂಪತ್ತು ಎಂಬುದನ್ನು ವ್ಯಾಪಕ ಅರ್ಥದಲ್ಲಿ ಬಳಸಬಹುದು ಎಂದು ಕರ್ನಾಟಕ ವರ್ಸಸ್‌ ರಂಗನಾಥ ರೆಡ್ಡಿ ಪ್ರಕರಣದಲ್ಲಿ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ನೀಡಿರುವ ತೀರ್ಪಿನಲ್ಲಿ ಹೇಳಿದ್ದಾರೆ. ಹಾಗೆಯೇ ಸಂಜೀವ್‌ ಕೋಕ್‌ ಮ್ಯಾನುಫ್ಯಾಕ್ಚರಿಂಗ್‌ ಕಂಪನಿ ವರ್ಸಸ್‌ ಭಾರತ್ ಕೋಕಿಂಗ್ ಕೋಲ್‌ ಲಿಮಿಟೆಡ್‌ (1983) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಕೂಡ ಇದೇ ಅರ್ಥದಲ್ಲಿ ಈ ವಿಧಿಯನ್ನು ವ್ಯಾಖ್ಯಾನಿಸಿದ್ದನ್ನೂ ಒಪ್ಪುವುದು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

ಮಹಾರಾಷ್ಟ್ರ ವಸತಿ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ–1976ರ 8–ಎ ಅಧ್ಯಾಯವು ಖಾಸಗಿ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲು ಅವಕಾಶ ನಿಡುತ್ತದೆ. ಇದನ್ನು ಪ್ರಶ್ನಿಸಿ, ಆಸ್ತಿಗಳ ಮಾಲೀಕರ ಸಂಘವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ನ್ಯಾಯಪೀಠ ಹೇಳಿದ್ಧೇನು?

* ಎಲ್ಲ ಖಾಸಗಿ ಸ್ವತ್ತುಗಳು ಸಮುದಾಯದ ಸಂಪನ್ಮೂಲಗಳು ಎಂದು ಹೇಳುವುದು ಸರಿಯಲ್ಲ

* ಆರ್ಥಿಕ ನೀತಿಯೊಂದರ ನಿರೂಪಣೆ ಸುಪ್ರೀಂ ಕೋರ್ಟ್‌ನ ಕೆಲಸವಲ್ಲ. ಜನರೇ ಆಯ್ಕೆ ಮಾಡಿದ ಸರ್ಕಾರ ವಿವಿಧ ಆರ್ಥಿಕ ನೀತಿಯನ್ನು ಅಳವಡಿಸಿಕೊಂಡಿದೆ

* ವ್ಯಕ್ತಿಗಳು ಹೊಂದಿರುವ ಎಲ್ಲ ಸಂಪನ್ಮೂಲಗಳನ್ನು ಸಮುದಾಯದ ಸ್ವತ್ತುಗಳು ಎಂದು ಪರಿಗಣಿಸುವುದು ಸಂವಿಧಾನದ ತತ್ವವನ್ನೇ ಬುಡಮೇಲು ಮಾಡಿದಂತಾಗುತ್ತದೆ

* 1960 ಹಾಗೂ 1970ರಲ್ಲಿ ಸಮಾಜವಾದಿ ಅರ್ಥವ್ಯವಸ್ಥೆಗೆ ಒತ್ತು ನೀಡಲಾಗಿತ್ತು. ಆದರೆ 1990ರಿಂದ ಸ್ಥಿತ್ಯಂತರ ಕಂಡುಬಂದಿದ್ದು ಮಾರುಕಟ್ಟೆ ಬಗ್ಗೆ ಒಲವು ಹೊಂದಿದ ಅರ್ಥವ್ಯವಸ್ಥೆ ಪ್ರಾಮುಖ್ಯ ಪಡೆದಿದೆ

* ದೇಶದ ಅರ್ಥವ್ಯವಸ್ಥೆಯು ಯಾವುದೇ ಒಂದು ನಿರ್ದಿಷ್ಟ ಆರ್ಥಿಕನೀತಿಯನ್ನು ನಂಬಿಲ್ಲ ಹಾಗೂ ದೇಶಕ್ಕೆ ಎದುರಾದ ಸವಾಲುಗಳನ್ನು ಎದುರಿಸಲು ಅಗತ್ಯವಾದ ನೀತಿಯನ್ನು ಅಳವಡಿಸಿಕೊಂಡಿದೆ

* ಕಳೆದ 30 ವರ್ಷಗಳಿಂದೀಚೆಗೆ ದೇಶ ಅಳವಡಿಸಿಕೊಂಡಿರುವ ಕ್ರಿಯಾಶೀಲ ಆರ್ಥಿಕ ನೀತಿಯು ಭಾರತವನ್ನು ವಿಶ್ವದಲ್ಲಿಯೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕ ಶಕ್ತಿಯನ್ನಾಗಿ ರೂಪಿಸಿದೆ

‘ಅಯ್ಯರ್ ಕುರಿತ ಹೇಳಿಕೆ ಅನಪೇಕ್ಷಿತ’
ತೀರ್ಪು ಪ್ರಕಟಿಸುವ ವೇಳೆ ಹಿಂದಿನ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಕುರಿತು ಸಿಜೆಐ ಚಂದ್ರಚೂಡ್‌ ನೀಡಿದ ಹೇಳಿಕೆಗೆ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನಾ ಹಾಗೂ ಸುಧಾಂಶು ಧುಲಿಯಾ ಅವರು ಆಕ್ಷೇಪ ವ್ಯಕ್ತಪಡಿಸಿದರು. ‘ಸಿಜೆಐ ಅವರ ಅಭಿಪ್ರಾಯಗಳು ಅನಪೇಕ್ಷಿತ ಹಾಗೂ ಸಮರ್ಥನೀಯವಲ್ಲ’ ಎಂದು ನ್ಯಾಯಮೂರ್ತಿ ನಾಗರತ್ನಾ ಹೇಳಿದರೆ ‘ಸಿಜೆಐ ಅವರ ಹೇಳಿಕೆಗಳು ಕಟುವಾದ ಟೀಕೆಯಾಗಿತ್ತು. ಇಂತಹ ಹೇಳಿಕೆಯನ್ನು ತಪ್ಪಿಸಬಹುದಿತ್ತು’ ಎಂದು ನ್ಯಾಯಮೂರ್ತಿ ಧುಲಿಯಾ ಹೇಳಿದರು. ‘ಖಾಸಗಿ ಸ್ವತ್ತುಗಳ ಪ್ರಕರಣ ಕುರಿತು ಆಗ ತೀರ್ಪು ನೀಡಿದ್ದ ನ್ಯಾಯಮೂರ್ತಿ ಅಯ್ಯರ್ ಅವರ ಸಿದ್ಧಾಂತವು ವಿಶಾಲವಾದ ಮತ್ತು ಹೊಂದಿಕೊಳ್ಳಬಲ್ಲ ಗುಣಲಕ್ಷಣ ಹೊಂದಿರುವ ಸಂವಿಧಾನಕ್ಕೆ ಅನ್ಯಾಯ ಮಾಡಿತ್ತು’ ಎಂದು ಸಿಜೆಐ ಹೇಳಿದ್ದರು. ನಾಗರತ್ನಾ ಅವರು 130 ಪುಟಗಳ ಪ್ರತ್ಯೇಕ ತೀರ್ಪು ನೀಡಿದ್ದು ‘ಆರ್ಥಿಕ ನೀತಿ ನಿರೂಪಣೆ ಮಾಡುವುದು ನ್ಯಾಯಾಲಯದ ಕೆಲಸವಲ್ಲ. ಆದರೆ ಆರ್ಥಿಕ ಪ್ರಜಾಪ್ರಭುತ್ವವೊಂದರ ಬುನಾದಿಗೆ ಬೇಕಾದಂತಹ ಚೌಕಟ್ಟು ರಚನೆಗೆ ನೆರವು ನೀಡುವುದಾಗಿದೆ. ಹೀಗಾಗಿ ನ್ಯಾಯಮೂರ್ತಿ ಅಯ್ಯರ್‌ ಅವರ ಸಿದ್ಧಾಂತವು ಸಂವಿಧಾನಕ್ಕೆ ಅಪಚಾರವೆಸಗಿಲ್ಲ’ ಎಂದು ಹೇಳಿದ್ದಾರೆ. ‘ಸರ್ಕಾರದ ಆರ್ಥಿಕ ನೀತಿಗಳಲ್ಲಿ ಭಾರಿ ಬದಲಾವಣೆಗಳಾಗಿವೆ ಎಂದ ಮಾತ್ರಕ್ಕೆ ಈ ಹಿಂದಿನ ನ್ಯಾಯಮೂರ್ತಿಗಳಿಂದ ಸಂವಿಧಾನಕ್ಕೆ ಅನ್ಯಾಯವಾಗಿದೆ ಎಂದು ಹೇಳುವುದು ಸರಿಯಲ್ಲ’ ಎಂದೂ ಹೇಳಿದ್ದಾರೆ. ‘ನ್ಯಾಯಮೂರ್ತಿ ಅಯ್ಯರ್ ಸಿದ್ಧಾಂತ ಕುರಿತಂತೆ ವ್ಯಕ್ತವಾದ ಹೇಳಿಕೆಗೆ ನನ್ನ ಪ್ರಬಲ ಅಸಮ್ಮತಿಯನ್ನು ಈ ವೇಳೆ ದಾಖಲಿಸುತ್ತೇನೆ’ ಎಂದು ನ್ಯಾಯಮೂರ್ತಿ ಧುಲಿಯಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.