ಹೈದರಾಬಾದ್: ತೆಲಂಗಾಣಕ್ಕಾಗಿ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಪ್ರಶ್ನಿಸುವ ಮೊದಲು, ರಾಜ್ಯಕ್ಕಾಗಿ ಬಿಆರ್‌ಎಸ್ ನಾಯಕ, ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಏನು ಮಾಡಿದ್ದಾರೆ ಎಂಬುದನ್ನು ಜನರಿಗೆ ಹೇಳಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಕೆಸಿಆರ್ ಅವರು ದೇಶದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರವನ್ನು ನಡೆಸುತ್ತಿದ್ದಾರೆ. ಹೆಚ್ಚು ಹಣ ಗಳಿಸುವಂತಹ ಖಾತೆಗಳು ತಮ್ಮ ಕುಟುಂಬಸ್ಥರ ಬಳಿಯೇ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯಲ್ಲಿಯೇ ಪಕ್ಷ ನೀಡಿರುವ ಆರು ಭರವಸೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ರಾಹುಲ್ ಹೇಳಿದರು.
‘ತೆಲಂಗಾಣ ಚುನಾವಣೆಯಲ್ಲಿ ಊಳಿಗಮಾನ್ಯ ಪದ್ಧತಿಯನ್ನು ಅನುಸರಿಸುವ ಸರ್ಕಾರ ಮತ್ತು ಜನರ ಪರವಾಗಿರುವ ಸರ್ಕಾರದ ನಡುವೆ ಹೋರಾಟ ನಡೆಯಲಿದೆ. ನಿಮ್ಮ ಮುಖ್ಯಮಂತ್ರಿ (ಕೆಸಿಆರ್), ಕಾಂಗ್ರೆಸ್ ಪಕ್ಷ ರಾಜ್ಯಕ್ಕಾಗಿ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ. ಆದರೆ, ಅವರು ಏನು ಮಾಡಿದ್ದಾರೆ ಎಂಬುದು ಪ್ರಶ್ನೆಯಾಗಿದೆ’ ಎಂದು ರಾಹುಲ್ ಕಿಡಿಕಾರಿದರು.
ತೆಲಂಗಾಣದಲ್ಲಿ ಬಿಆರ್‌ಎಸ್ ಮತ್ತು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ಕಾಂಗ್ರೆಸ್‌ನ ಗುರಿಯಾಗಿದೆ. ಅಲ್ಲದೆ, ಕೆಸಿಆರ್ ಅವರು ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ ಎನ್ನಲಾದ ಹೈದರಾಬಾದ್ ನಗರವನ್ನು ಕಾಂಗ್ರೆಸ್ ಅಭಿವೃದ್ಧಿ ಪಡಿಸಿದ್ದು, ಅದನ್ನು ಐಟಿ ಹಬ್ ಆಗಿ ಪರಿವರ್ತಿಸಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.