ನವದೆಹಲಿ: ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಕೋರಿ ಪದೇ ಪದೇ ಅರ್ಜಿಗಳು ಸಲ್ಲಿಕೆಯಾಗುತ್ತಿರುವುದಕ್ಕೆ ದೆಹಲಿ ಹೈಕೋರ್ಟ್ ಬುಧವಾರ ಅಸಮಾಧಾನ ವ್ಯಕ್ತಪಡಿಸಿತು.
ಒಮ್ಮೆ ಈ ರೀತಿಯ ಅರ್ಜಿಯನ್ನು ನ್ಯಾಯಾಲಯ ಪರಿಶೀಲಿಸಿದ ಬಳಿಕವೂ ಇದೇ ರೀತಿಯ ಅರ್ಜಿಗಳು ಪುನರಾವರ್ತಿತವಾಗಿ ಬರುತ್ತಿವುದು ಸರಿಯಲ್ಲ ಎಂದ ಕೋರ್ಟ್, ಮುಂದುವರಿದ ಭಾಗಗಳನ್ನು ಹೊಂದಿರಲು ಇದು ಜೇಮ್ಸ್ ಬಾಂಡ್ ಸಿನಿಮಾ ಅಲ್ಲ ಎಂದು ಎಚ್ಚರಿಸಿತು.
ಈ ಕುರಿತು ಅರ್ಜಿ ಸಲ್ಲಿಸಿದ್ದ ಎಎಪಿ ಮಾಜಿ ಶಾಸಕ ಸಂದೀಪ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್, ನ್ಯಾಯಮೂರ್ತಿ ಮನ್ಮೀತ್ ಪಿ.ಎಸ್. ಅರೋರಾ ಅವರ ಪೀಠವು, ರಾಜಕೀಯ ಉದ್ದೇಶದಿಂದ ನೀವು ಇಲ್ಲಿಗೆ ಬಂದಿದ್ದೀರಿ ಎಂದು ಹೇಳಿತು. ಅಲ್ಲದೆ, ‘ನೀವು ವ್ಯವಸ್ಥೆಯನ್ನು ಅಣಕಿಸುತ್ತಿದ್ದೀರಿ’ ಎಂದ ಪೀಠವು, ಅರ್ಜಿದಾರರಿಗೆ ₹50,000 ದಂಡವನ್ನೂ ವಿಧಿಸಿತು.
‘ಈ ಕುರಿತು ಲೆಫ್ಟಿನೆಂಟ್ ಗವರ್ನರ್ ಪರಿಶೀಲಿಸುತ್ತಾರೆ. ಆದರೆ ನೀವು ಈ ವಿಚಾರದಲ್ಲಿ ನಮ್ಮನ್ನು ಎಳೆದು ತರಲು ಪ್ರಯತ್ನಿಸುತ್ತಿದ್ದೀರಿ’ ಎಂದು ಪೀಠ ಬೇಸರ ವ್ಯಕ್ತಪಡಿಸಿತು. ನ್ಯಾಯಪೀಠವು, ರಾಜಧಾನಿಯಲ್ಲಿ ರಾಜ್ಯಪಾಲರ ಆಡಳಿತ ಹೇರಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿತು.
ಕೇಜ್ರಿವಾಲ್ ಅವರ ಪದಚ್ಯುತಿಗಾಗಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ನ್ಯಾಯಾಲಯ ಮಾರ್ಚ್ 28ರಂದು ವಜಾಗೊಳಿಸಿತ್ತು. ಇಂತಹ ಪ್ರಕರಣದಲ್ಲಿ ನ್ಯಾಯಾಂಗದ ಹಸ್ತಕ್ಷೇಪಕ್ಕೆ ಯಾವುದೇ ಅವಕಾಶವಿಲ್ಲ. ಇದು ಇತರೆ ಅಂಗದ ಕೆಲಸ ಎಂದು ಹೇಳಿತ್ತು.
ಏಪ್ರಿಲ್ 4ರಂದು ನ್ಯಾಯಾಲಯವು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಎರಡನೇ ಪಿಐಎಲ್ ವಿಚಾರಣೆಗೆ ನಿರಾಕರಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಲೆಫ್ಟಿನೆಂಟ್ ಗರ್ವನರ್ ಅವರನ್ನು ಸಂಪರ್ಕಿಸಬಹುದು ಎಂದೂ ಹೇಳಿತ್ತು.
ಬಂಧನ ಪ್ರಶ್ನಿಸಿ ‘ಸುಪ್ರೀಂ’ ಮೊರೆ
ನವದೆಹಲಿ (ಪಿಟಿಐ): ಅಬಕಾರಿ ನೀತಿ ಹಗರಣ ಜತೆ ನಂಟಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತನ್ನ ಬಂಧನವನ್ನು ಎತ್ತಿಹಿಡಿದಿರುವ ಹೈಕೋರ್ಟ್ ತೀರ್ಪಿನ ವಿರುದ್ಧ ದಹೆಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರ ಅರ್ಜಿ ಸಲ್ಲಿಸಿದ್ದಾರೆ.
ಈ ಕುರಿತ ಅರ್ಜಿಯನ್ನು ಶೀಘ್ರವೇ ಪಟ್ಟಿ ಮಾಡಿ ವಿಚಾರಣೆ ನಡೆಸುವಂತೆ ಕೇಜ್ರಿವಾಲ್ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರನ್ನು ಕೋರಿದರು. ಇದಕ್ಕೆ ಸ್ಪಂದಿಸಿದ ಮುಖ್ಯ ನ್ಯಾಯಮೂರ್ತಿ ಈ ಕುರಿತು ಇ–ಮೇಲ್ ಮಾಡಿ ಪರಿಶೀಲಿಸುತ್ತೇನೆ ಎಂದು ಸೂಚಿಸಿದರು.
ಜಾರಿ ನಿರ್ದೇಶನಾಲಯವು ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.