ಪಟ್ನಾ: ಬಿಹಾರದ ಎನ್‌ಡಿಎ ಮೈತ್ರಿಯಲ್ಲಿ ಬಿರುಕು ಉಂಟಾಗಿದ್ದು ಬಿಜೆಪಿಯ ಮೈತ್ರಿ ಪಕ್ಷ ರಾಷ್ಟ್ರೀಯ ಲೋಕ ಸಮತಾ ಪಾರ್ಟಿ(ಆರ್‌ಎಲ್‌ಎಸ್‌ಪಿ) ಸ್ಥಾನ ಹಂಚಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ.
2019ರ ಲೋಕಸಭೆ ಚುನಾವಣೆಯಲ್ಲಿ 40 ಸ್ಥಾನಗಳ ಪೈಕಿ ತಲಾ 20 ಸ್ಥಾನಗಳಲ್ಲಿ ಬಿಜೆಪಿ ಮತ್ತು ಜೆಡಿಯು ಸ್ಪರ್ಧೆ ಮಾಡುವ ಬಗ್ಗೆ ಚರ್ಚಿಸಿವೆ. ನಮ್ಮಪಕ್ಷಕ್ಕೆ ಸ್ಪರ್ಧಿಸಲು ಹೆಚ್ಚಿನ ಸ್ಥಾನಗಳನ್ನು ನೀಡಬೇಕು ಎಂದುಆರ್‌ಎಲ್‌ಎಸ್‌ಪಿ ಅಧ್ಯಕ್ಷ ಉಪೇಂದ್ರ ಕುಶ್ವಾಹ ಒತ್ತಾಯಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಸಲ ನೀಡಿದ್ದ ಸ್ಥಾನಗಳಿಗಿಂತ ಈ ಬಾರಿ ಕಡಿಮೆ ಸ್ಥಾನಗಳನ್ನು ನೀಡುವ ಸಾಧ್ಯತೆ ಇದೆ ಎಂಬ ಸುಳಿವು ನೀಡಿದರು. ಬಿಜೆಪಿ ಎಷ್ಟು ಸ್ಥಾನಗಳನ್ನು ನೀಡಲಿದೆ ಎಂಬ ಪ್ರಶ್ನೆಗೆ ಉತ್ತರ ನೀಡದ ಉಪೆಂದ್ರ ಕುಶ್ವಾಹ ಬಿಜೆಪಿ ನೀಡಿರುವ ಸ್ಥಾನಗಳು ನಮಗೆ ಸಮಾಧಾನ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
ನಮ್ಮ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ನೀಡಬೇಕು ಎಂದು ಅಮಿತ್ ಶಾ ಅವರಲ್ಲಿ ಮನವಿ ಮಾಡಿದರು. ಬಿಹಾರದಲ್ಲಿ ಬಿಜೆಪಿ ಎನ್‌ಡಿಎ,ಆರ್‌ಎಲ್‌ಎಸ್‌ಪಿ ಹಾಗೂ ರಾಂ ವಿಲಾಸ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷದೊಂದಿಗೆ(ಎಲ್‌ಜೆಪಿ) ಮೈತ್ರಿ ಮಾಡಿಕೊಂಡಿದೆ. ಜೆಡಿಯುಗೆ 20 ಸ್ಥಾನಗಳನ್ನು ನೀಡಿ, ಉಳಿದ 20ರಲ್ಲಿ ಆರ್‌ಎಲ್‌ಎಸ್‌ಪಿ,ಎಲ್‌ಜೆಪಿ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ.
ಬಿಜೆಪಿ 16 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿ ಉಳಿದ ನಾಲ್ಕು ಸ್ಥಾನಗಳನ್ನು ಈ ಎರಡು ಪಕ್ಷಗಳಿಗೆ ಬಿಟ್ಟುಕೊಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿಆರ್‌ಎಲ್‌ಎಸ್‌ಪಿ ಮತ್ತು ಎಲ್‌ಜೆಪಿ ಬಿಜೆಪಿ ವಿರುದ್ಧ ಅಪಸ್ವರ ಎತ್ತಿವೆ.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 22, ಎಲ್‌ಜೆಪಿ 6,ಆರ್‌ಎಲ್‌ಎಸ್‌ಪಿ 3 ಸ್ಥಾನಗಳನ್ನು ಪಡೆದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.