ADVERTISEMENT

ಮೋದಿ ಸಂಪುಟದಲ್ಲಿ ಅಜಿತ್ ನೇತೃತ್ವದ NCPಗೆ ಸಿಗದ ಸ್ಥಾನ: ಸುಪ್ರಿಯಾ ಹೇಳಿದ್ದೇನು?

ಪಿಟಿಐ
Published 10 ಜೂನ್ 2024, 10:29 IST
Last Updated 10 ಜೂನ್ 2024, 10:29 IST
<div class="paragraphs"><p>ಎನ್‌ಸಿಪಿ (ಶರದ್‌ಪವಾರ್ ಬಣ) ನಾಯಕಿ ಸುಪ್ರಿಯಾ ಸುಳೆ </p></div>

ಎನ್‌ಸಿಪಿ (ಶರದ್‌ಪವಾರ್ ಬಣ) ನಾಯಕಿ ಸುಪ್ರಿಯಾ ಸುಳೆ

   

–ಪಿಟಿಐ ಚಿತ್ರ 

ಪುಣೆ: ಪ್ರಧಾನಿ ನರೇಂದ್ರ ಮೋದಿ ಅವರ ನೂತನ ಸಂಪುಟದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸಂಪುಟ ದರ್ಜೆಯ ಸ್ಥಾನ ಸಿಗದಿರುವುದಕ್ಕೆ ಆಶ್ಚರ್ಯಪಡಬೇಕಾಗಿಲ್ಲ ಎಂದು ಎನ್‌ಸಿಪಿ (ಶರದ್‌ಚಂದ್ರ ಪವಾರ್) ಬಣದ ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ.

ADVERTISEMENT

ಎನ್‌ಸಿಪಿಯ 25ನೇ ಸಂಸ್ಥಾಪನಾ ದಿನದ ಪ್ರಯುಕ್ತ ಸುದ್ದಿಗಾರರೊಂದಿಗೆ ಮಾತನಾಡಿದ ಬಾರಾಮತಿ ಲೋಕಸಭಾ ಕ್ಷೇತ್ರದ ಸಂಸದೆ ಸುಪ್ರಿಯಾ ಸುಳೆ, ‘ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಮುಂದಿನ ಐದು ವರ್ಷ ಸ್ಥಿರ ಸರ್ಕಾರ ನಡೆಸುತ್ತದೆ ಎಂದು ನಾನು ಭಾವಿಸುತ್ತೇನೆ. ಎನ್‌ಡಿಎ ಸರ್ಕಾರದ ಮೊದಲ ಸಂಪುಟ ಸಭೆ ಇಂದು ನಡೆಯಲಿದ್ದು, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ನಿಯಂತ್ರಣ ಹಾಗೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ತೀರ್ಮಾನ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಆಡಳಿತದಲ್ಲಿ ಎನ್‌ಸಿಪಿ ಮಿತ್ರಪಕ್ಷವಾಗಿ ಕೆಲಸ ಮಾಡಿತ್ತು. ಸಿಂಗ್‌ ಅವರು ನಮ್ಮ ತಂದೆ ಶರದ್ ಪವಾರ್ ಅವರಿಗೆ ವಿಶ್ವಾಸ ಮತ್ತು ಪ್ರೀತಿಯನ್ನು ತೋರಿಸಿದ್ದರು. ಆ ಸಂದರ್ಭದಲ್ಲಿ ನಮ್ಮ ಪಕ್ಷವು (ಎನ್‌ಸಿಪಿ) ಕೇವಲ ಎಂಟು ಅಥವಾ ಒಂಬತ್ತು ಸಂಸದರನ್ನು ಹೊಂದಿದ್ದರೂ ಕೂಡ ನಮಗೆ ಮೂರು ಕ್ಯಾಬಿನೆಟ್ ಸ್ಥಾನಗಳನ್ನು ನೀಡಿದ್ದರು. ಕಾಂಗ್ರೆಸ್ ಸಂಸದರ ಸಂಖ್ಯಾಬಲದ ಬಗ್ಗೆ ಯೋಚಿಸುವುದಿಲ್ಲ. ಬದಲಾಗಿ ತನ್ನ ಮಿತ್ರಪಕ್ಷಗಳನ್ನು ಗೌರವಿಸುತ್ತದೆ ಎಂದು ಹೇಳಿದ್ದಾರೆ.

ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ನಮ್ಮನ್ನು (ಎನ್‌ಸಿಪಿ) ಎಲ್ಲರೂ ಪರಸ್ಪರ ಗೌರವದಿಂದ ನಡೆಸಿಕೊಂಡಿದ್ದಾರೆ. ನಾವು ಯಾವುದೇ ‌ಸೂತ್ರಕ್ಕೆ ಅಂಟಿಕೊಳ್ಳಲಿಲ್ಲ. ನಮ್ಮ ಸಂಬಂಧವು ಪರಸ್ಪರ ಗೌರವ ಮತ್ತು ಅರ್ಹತೆಯ ಮೇಲೆ ಆಧಾರಿತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ 10 ವರ್ಷಗಳಲ್ಲಿ ಬಿಜೆಪಿಯವರು ಮಿತ್ರಪಕ್ಷಗಳ ನಾಯಕರನ್ನು ಹೇಗೆ ನಡೆಸಿಕೊಂಡರು ಎಂಬುದನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ. ಇಗೀಗ ಎನ್‌ಸಿಪಿಗೆ ಸಂಪುಟ ದರ್ಜೆಯ ಸ್ಥಾನ ಸಿಗದಿರುವುದಕ್ಕೆ ಆಶ್ಚರ್ಯಪಡಬೇಕಾಗಿಲ್ಲ ಎಂದಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಸಂಪುಟ ದರ್ಜೆಯ ಸ್ಥಾನ ಬೇಕು ಎಂದು ಪಟ್ಟು ಹಿಡಿದಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ, ರಾಜ್ಯ ದರ್ಜೆಯ ಸಚಿವ (ಸ್ವತಂತ್ರ ನಿರ್ವಹಣೆ) ಸ್ಥಾನವನ್ನು ಒಪ್ಪದೆ ಇರಲು ತೀರ್ಮಾನಿಸಿದೆ.

ಆದರೆ, ಈ ವಿಷಯವನ್ನು ಇನ್ನಷ್ಟು ವಿಷಮಗೊಳಿಸದೆ ಇರಲು ಬಿಜೆಪಿ ಹಾಗೂ ಎನ್‌ಸಿಪಿ ತೀರ್ಮಾನಿಸಿವೆ. ಭಾನುವಾರ ನಡೆದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಎನ್‌ಸಿಪಿ ಪ್ರತಿನಿಧಿಗಳು ಭಾಗಿಯಾಗಿದ್ದರು. ಅಲ್ಲದೆ, ಇನ್ನೂ ಕೆಲವು ದಿನಗಳವರೆಗೆ ಕಾಯಲು ಸಿದ್ಧವಿರುವುದಾಗಿ ಎನ್‌ಸಿಪಿ ಹೇಳಿದೆ. ಇತ್ತ ಬಿಜೆಪಿಯು ಎನ್‌ಸಿಪಿ ವಿಚಾರವಾಗಿ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಿರುವುದಾಗಿ ತಿಳಿಸಿದೆ.

ಕೇಂದ್ರದಲ್ಲಿ ಸಚಿವ ಸ್ಥಾನ ಪಡೆಯಬೇಕಿದ್ದ ಎನ್‌ಸಿಪಿ ಪ್ರತಿನಿಧಿ ಪ್ರಫುಲ್‌ ಪಟೇಲ್ ಅವರು ಈಗಾಗಲೇ ಸಂಪುಟ ದರ್ಜೆಯ ಸಚಿವ ಸ್ಥಾನವನ್ನು ಹೊಂದಿದ್ದವರು. ಅವರು ಈಗ ಅದಕ್ಕಿಂತ ಕೆಳಹಂತದ ಸ್ಥಾನವನ್ನು ಒಪ್ಪುವುದಿಲ್ಲ ಎಂದು ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರು ಬಿಜೆಪಿಯ ನಾಯಕರಿಗೆ ತಿಳಿಸಿದ್ದಾರೆ.

ಎನ್‌ಸಿ‍ಪಿ ನಾಯಕರು ತಮ್ಮ ಪಟ್ಟು ಬಿಗಿಗೊಳಿಸಿದಾಗ ಬಿಜೆಪಿಯು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ ಅವರನ್ನು ಪವಾರ್ ಹಾಗೂ ಇತರರ ಜೊತೆ ಮಾತುಕತೆಗೆ ಕಳುಹಿಸಿತ್ತು. ‘ಕೆಲವು ದಿನಗಳವರೆಗೆ ಕಾಯಲು ನಾವು ಸಿದ್ಧರಿದ್ದೇವೆ ಎಂಬುದನ್ನು ಅವರಿಗೆ ತಿಳಿಸಿದ್ದೇವೆ. ನಮಗೆ ಸಂಪುಟ ದರ್ಜೆಯೇ ಬೇಕು’ ಎಂದು ಪವಾರ್ ಅವರು ಸುದ್ದಿಗಾರರ ಬಳಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.