ಮುಂಬೈ: ಬಾಲಿವುಡ್ ನಟ, ದಿವಂಗತ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ವಿನಾ ಕಾರಣ ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಗುರಿಯಾಗಿಸಲಾಗುತ್ತಿದೆ ಎಂದು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಮಂಗಳವಾರ ಹೇಳಿದ್ದಾರೆ. ಅಲ್ಲದೆ, ಈ ಪ್ರಕರಣಕ್ಕೂ ತಮಗೂ ಯಾವುದೇ ಹಂತದಲ್ಲೂ ಯಾವುದೇ ಸಂಬಂಧವಿಲ್ಲ ಎಂದೂ ಅವರು ಹೇಳಿದ್ದಾರೆ.
‘ಸುಶಾಂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಮಂದಿ ಸುಖಾಸುಮ್ಮನೆ ವೈಯಕ್ತಿಕವಾಗಿ ನನ್ನ ಮೇಲೆ ಮತ್ತು ಠಾಕ್ರೆ ಕುಟುಂಬದ ಮೇಲೆ ಕೆಸರೆರಚುವ ಪ್ರಯತ್ನ ಮಾಡುತ್ತಿದ್ದಾರೆ. ಇದರಲ್ಲಿ ನಮ್ಮ ಯಾವುದೇ ಪಾತ್ರವಿಲ್ಲ. ಸುಶಾಂತ್ ಅವರ ಸಾವಿನ ವಿಷಯವನ್ನು ರಾಜಕೀಯಗೊಳಿಸುವುದು ಮಾನವೀಯತೆಗೆ ಮಾಡಿದ ಕಳಂಕ,’ ಎಂದು ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಮಾಧ್ಯಮ ಹೇಳಿಕೆಯನ್ನು ಅವರು ಟ್ವಿಟರ್‌ನಲ್ಲಿಯೂ ಹಂಚಿಕೊಂಡಿದ್ದಾರೆ.
‘ಬಾಲಿವುಡ್‌ನ ಹಲವರೊಂದಿಗೆ ನಾನು ಸೌಹಾರ್ದಯುತ ಸ್ನೇಹ ಸಂಬಂಧವನ್ನು ಹಂಚಿಕೊಂಡಿದ್ದೇನೆ. ಇದು ಅಪರಾಧವಲ್ಲ,’ ಎಂದೂ ಆದಿತ್ಯ ಠಾಕ್ರೆ ಪ್ರತಿಪಾದಿಸಿದ್ದಾರೆ.
‘ಹಿಂದೂ ಹೃದಯ ಸಾಮ್ರಾಟ ಬಾಲಾಸಾಹೇಬ್ ಠಾಕ್ರೆ ಅವರ ಮೊಮ್ಮಗನಾಗಿ, ಮಹಾರಾಷ್ಟ್ರ, ಶಿವಸೇನೆ ಮತ್ತು ಠಾಕ್ರೆ ಕುಟುಂಬದ ಪ್ರತಿಷ್ಠೆಗೆ ಧಕ್ಕೆ ತರುವ ಯಾವುದೇ ಕೃತ್ಯವನ್ನು ನಾನು ಮಾಡುವುದಿಲ್ಲ,’ ಎಂದೂ ಆದಿತ್ಯ ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.