ನವದೆಹಲಿ: ದೇಶದ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ಲೋಕಸಭೆಗೆ ಮತದಾನ ಪೂರ್ಣಗೊಂಡಿರುವ ಈ ಹಂತದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಅವರ ಪೌರತ್ವಕ್ಕೆ ಸಂಬಂಧಿಸಿ ಕೇಂದ್ರ ಗೃಹ ಸಚಿವಾಲಯ ನೋಟಿಸ್ ನೀಡಿದೆ. ‘ನೀವು ಬ್ರಿಟಿಷ್ ಪ‍್ರಜೆಯೇ ಎಂಬ ಬಗ್ಗೆ 15 ದಿನಗಳೊಳಗೆ ಪ್ರತಿಕ್ರಿಯೆ ನೀಡಬೇಕು’ ಎಂದು ನೋಟಿಸ್‌ನಲ್ಲಿ ಹೇಳಿದೆ.
ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು 2017ರ ಸೆಪ್ಟೆಂಬರ್‌ನಲ್ಲಿ ನೀಡಿದ ದೂರಿನ ಆಧಾರದಲ್ಲಿ ಈ ನೋಟಿಸ್ ನೀಡಲಾಗಿದೆ. ಬ್ರಿಟನ್‌ನಲ್ಲಿ ಸ್ಥಾಪಿಸಿದ ಕಂಪನಿಯ ದಾಖಲೆಗಳಲ್ಲಿ ರಾಹುಲ್ ಅವರು ತಾವು ಬ್ರಿಟಿಷ್ ಪ್ರಜೆ ಎಂದು ಘೋಷಿಸಿಕೊಂಡಿದ್ದರು ಎಂದು ಸ್ವಾಮಿ ಆರೋಪಿಸಿದ್ದರು. ಸ್ವಾಮಿ ಅವರು ಕಾಂಗ್ರೆಸ್ ಮತ್ತು ಗಾಂಧಿ–ನೆಹರೂ ಕುಟುಂಬದ ಕಟು ಟೀಕಾಕಾರ.
ಬ್ಯಾಕಾಪ್ಸ್ ಲಿ. ಎಂಬ ಕಂಪನಿಯನ್ನು ರಾಹುಲ್ ಅವರು 2003ರಲ್ಲಿ ಬ್ರಿಟನ್‌ನಲ್ಲಿ ನೋಂದಣಿ ಮಾಡಿಸಿದ್ದಾರೆ ಎಂದು ತಮ್ಮ ದೂರಿನಲ್ಲಿ ಸ್ವಾಮಿ ವಿವರಿಸಿದ್ದಾರೆ.
‘2005ರ ಅಕ್ಟೋಬರ್ 10 ಮತ್ತು 2006ರ ಅಕ್ಟೋಬರ್ 31ರಂದು ಸಲ್ಲಿಸಿದ್ದ ಕಂಪನಿಯ ವಾರ್ಷಿಕ ಲೆಕ್ಕಪತ್ರದಲ್ಲಿ ನಿಮ್ಮ ಹುಟ್ಟಿದ ದಿನಾಂಕ 1970ರ ಜೂನ್ 19 ಎಂದು ನಮೂದಿಸಲಾಗಿದೆ. ನೀವು ಬ್ರಿಟನ್ ಪ್ರಜೆ ಎಂದೂ ಉಲ್ಲೇಖಿಸಲಾಗಿದೆ. ಈ ಬಗೆಗಿನ ಸತ್ಯಾಂಶವೇನು ಎಂಬುದನ್ನು ತಿಳಿಸಬೇಕು’ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ಸಮಯ ಸರಿಯಲ್ಲ: ರಾಜನಾಥ್ ಸಿಂಗ್
ನೋಟಿಸ್ ನೀಡಿಕೆ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‌ಪ್ರತಿಕ್ರಿಯೆ ನೀಡಿದ್ದಾರೆ. ಇದು ಸಹಜ ಪ್ರಕ್ರಿಯೆಯೇ ಹೊರತುದೊಡ್ಡ ಬೆಳವಣಿಗೆಯೇನೂ ಅಲ್ಲ ಎಂದು ಅವರು ಹೇಳಿದ್ದಾರೆ. ಆದರೆ, ನೋಟಿಸ್ ನೀಡಿದ ಸಮಯ ಸರಿಯಾಗಿಲ್ಲ ಎಂದು ಅವರುಅಭಿಪ್ರಾಯಪಟ್ಟಿದ್ದಾರೆ.
ಚುನಾವಣೆಯ ನಡೆಯುತ್ತಿರುವಾಗಪ್ರಮುಖ ವಿರೋಧ ಪಕ್ಷದ ನಾಯಕನಿಗೆ ನೋಟಿಸ್ ನೀಡಿದ ಸಮಯ ಸರಿಯೇ ಎಂಬ ಪ್ರಶ್ನೆಗೆ ‘ಸರಿಯಲ್ಲ. ಆದರೆ, ಈ ಪ್ರಶ್ನೆಯನ್ನು ಸಂಸತ್ತಿನಲ್ಲಿಯೇ ಎತ್ತಲಾಗಿತ್ತು. ಸ್ವಾಮಿ ಅವರು ಸಚಿವಾಲಯಕ್ಕೆ ಹಲವು ಬಾರಿ ಪತ್ರ ಬರೆದಿದ್ದಾರೆ. ಅದರ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದರು.
ಗಮನ ತಿರುಗಿಸುವ ಯತ್ನ: ಕಾಂಗ್ರೆಸ್
ಈ ಆರೋಪ ರಾಜಕೀಯಪ್ರೇರಿತ ಎಂದು ಕಾಂಗ್ರೆಸ್ ಪಕ್ಷ ಪ್ರತಿಕ್ರಿಯೆ ನೀಡಿದೆ. ‘ನಿರುದ್ಯೋಗ, ಕೃಷಿ ಕ್ಷೇತ್ರದ ಸಂಕಷ್ಟ, ಕಪ್ಪು ಹಣದಂತಹ ಸಮಸ್ಯೆಗಳಿಗೆ ಪ್ರಧಾನಿ ಬಳಿಯಲ್ಲಿ ಉತ್ತರ ಇಲ್ಲ. ಹಾಗಾಗಿಯೇ ಅವರು ಇಂತಹ ನೋಟಿಸ್ ನೀಡುವ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ರಾಹುಲ್ ಅವರು ಭಾರತದ ಪ್ರಜೆ ಎಂಬುದು ಇಡೀ ಜಗತ್ತಿಗೇ ಗೊತ್ತಿದೆ. ಸ್ವಾಮಿ ಅವರು ಕೊಟ್ಟ ದೂರಿನ ರೀತಿಯದ್ದೇ ದೂರೊಂದನ್ನು 2015ರಲ್ಲಿ ಸುಪ್ರೀಂ ಕೋರ್ಟ್‌ಗೆ ನೀಡಲಾಗಿತ್ತು. ಆ ದೂರು ದುರುದ್ದೇಶಪೂರಿತ ಎಂದು ಸುಪ್ರೀಂ ಕೋರ್ಟ್ ವಜಾ ಮಾಡಿತ್ತು ಎಂದು ಸುರ್ಜೇವಾಲಾ ನೆನಪಿಸಿದ್ದಾರೆ.
ರಾಹುಲ್ ಎಲ್ಲಿಯವರು: ಬಿಜೆಪಿ
ರಾಹುಲ್ ಗಾಂಧಿ ನಿಗೂಢ ಮನುಷ್ಯ ಎಂದು ಬಿಜೆಪಿ ಬಣ್ಣಿಸಿದೆ. ಕೇಂದ್ರ ಗೃಹ ಸಚಿವಾಲಯದ ನೋಟಿಸ್‌ಗೆ ಸಂಬಂಧಿಸಿದ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ‘ರಾಹುಲ್ ಗಾಂಧಿ ಅವರು ಲಂಡನ್‌ನವರೇ ಅಥವಾ ಲ್ಯೂಟೆನ್ಸ್‌ನವರೇ’ ಎಂದು ಪ್ರಶ್ನಿಸಿದೆ.
ರಾಹುಲ್ ಅವರ ಪೌರತ್ವ ಪ್ರಶ್ನೆಯು ಪೌರತ್ವ, ಗೊಂದಲ ಮತ್ತು ಸ್ಪಷ್ಟೀಕರಣಗಳ ಕತೆಯಾಗಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ.
*
ರಾಹುಲ್ ಭಾರತೀಯ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಅವರು ಇಲ್ಲಿಯೇ ಹುಟ್ಟಿದವರು, ಇಲ್ಲಿಯೇ ಬೆಳೆದವರು. ಇದೇನು ಅಸಂಬದ್ಧ ಈಗ? ಸೋಲುವ ಭೀತಿಯಿಂದಾಗಿ ಹೀಗೆಲ್ಲ ಮಾಡುತ್ತಿದ್ದಾರೆ ಅನ್ನಿಸುತ್ತಿದೆ.
-ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
*
ಗೊಂದಲಕ್ಕೆ ರಾಹುಲ್ ಪರ್ಯಾಯ ಪದ. ಅವರೊಬ್ಬ ನಿಗೂಢ ವ್ಯಕ್ತಿಯಾಗಿದ್ಧಾರೆ. ಲಂಡನ್‌ನ ರಾಹುಲ್ ಗಾಂಧಿ ನಿಜವೇ, ಲ್ಯೂಟೆನ್ಸ್‌ನ ರಾಹುಲ್ ಗಾಂಧಿ ನಿಜವೇ ಎಂದು ನಾವು ತಿಳಿಯಲು ಬಯಸಿದ್ದೇವೆ.
-ಸಂಬಿತ್ ಪಾತ್ರ, ಬಿಜೆಪಿ ವಕ್ತಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.