ಚೆನ್ನೈ: ತಮಿಳು ಭಾಷಿಕರಿದ್ದ ಪ್ರದೇಶಗಳನ್ನು ಒಟ್ಟುಗೂಡಿಸಲು ಹೋರಾಟ ನಡೆಸಿ, ಮಡಿದವರನ್ನು ಸ್ಮರಿಸುವುದಕ್ಕಾಗಿ ಶುಕ್ರವಾರ ನಡೆದ ‘ಗಡಿ ಹುತಾತ್ಮರ ದಿನ’ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಹುತಾತ್ಮರಿಗೆ ಗೌರವ ಸಲ್ಲಿಸಿದರು.
ಆದರೆ, ಈ ದಿನವನ್ನು ‘ತಮಿಳು ನಾಡು ದಿನ’ವನ್ನಾಗಿ ಆಚರಿಸಬೇಕು ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಹಾಗೂ ಟಿವಿಕೆ ಪಕ್ಷದ ಸಂಸ್ಥಾಪಕರೂ ನಟ ವಿಜಯ್ ಪ್ರತಿಪಾದಿಸಿದ್ದಾರೆ.
‘ಭಾಷೆಗಳ ಆಧಾರದಲ್ಲಿ ರಾಜ್ಯಗಳ ಪುನರ್ವಿಂಗಡಣೆ ಮಾಡಿದ ಸಂದರ್ಭದಲ್ಲಿ, ತಮಿಳುನಾಡಿನ ಸದ್ಯದ ಭೌಗೋಳಿಕ ಗಡಿಗಳನ್ನು ನವೆಂಬರ್ 1ರಂದು ಗುರುತಿಸಲಾಗಿತ್ತು. ಹೀಗಾಗಿ ಈ ದಿನವನ್ನು ತಮಿಳುನಾಡು ದಿನವನ್ನಾಗಿ ಆಚರಿಸಬೇಕು’ ಎಂಬುದು ಅಣ್ಣಾಮಲೈ ಹಾಗೂ ವಿಜಯ್ ಅವರ ಸಮರ್ಥನೆಯಾಗಿದೆ.
ಜುಲೈ 18ರಂದು ತಮಿಳುನಾಡು ದಿನ ಆಚರಿಸುವ ಕುರಿತು ಸ್ಟಾಲಿನ್ ನೇತೃತ್ವದ ಸರ್ಕಾರ ಕಳೆದ ವರ್ಷ ಘೋಷಿಸಿತ್ತು.
ಮದ್ರಾಸ್ ಪ್ರೆಸಿಡೆನ್ಸಿಯನ್ನು ತಮಿಳುನಾಡು ಎಂಬುದಾಗಿ ಮರುನಾಮಕರಣ ಮಾಡುವ ಕುರಿತು ಆಗಿನ ಮುಖ್ಯಮಂತ್ರಿ ಸಿ.ಎನ್.ಅಣ್ಣಾದೊರೈ ಅವರು 1967ರ ಜುಲೈ 18ರಂದು ವಿಧಾನಸಭೆಯಲ್ಲಿ ಗೊತ್ತುವಳಿ ಮಂಡಿಸಿದ್ದರು.
‘ತಮಿಳುನಾಡಿನ ಉತ್ತರ ಮತ್ತು ದಕ್ಷಿಣ ಗಡಿಗಳ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದವರನ್ನು ಸ್ಮರಿಸುವ ದಿನ ನವೆಂಬರ್ 1’ ಎಂದು ಮುಖ್ಯಮಂತ್ರಿ ಸ್ಟಾಲಿನ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ತಮಿಳುನಾಡು ದಿನ ಆಚರಣೆ ಅಂಗವಾಗಿ ಶುಭಾಶಯಗಳನ್ನು ಕೋರುತ್ತೇನೆ’ ಎಂದು ಹೇಳಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ, ‘ತಮಿಳು ರಾಜ್ಯದ ಭಾಷೆಯಾಗಿ, ತಮಿಳುನಾಡು ಅಸ್ತಿತ್ವಕ್ಕೆ ಬಂದ ದಿನವಿದು’ ಎಂದು ಹೇಳಿದ್ದಾರೆ.
‘ಡಿಎಂಕೆ ನೇತೃತ್ವದ ಸರ್ಕಾರದ ಅಸಮರ್ಪಕ ನಿರ್ವಹಣೆಯಿಂದಾಗಿ ತಮಿಳುನಾಡು ತನ್ನ ವೈಭವವನ್ನು ಕಳೆದುಕೊಂಡಿದೆ’ ಎಂದೂ ಕುಟುಕಿದ್ದಾರೆ.
‘ಭಾಷೆಗಳ ಆಧಾರದಲ್ಲಿ 1956ರ ನವೆಂಬರ್ 1ರಂದು ರಾಜ್ಯಗಳ ಮರುವಿಂಗಡಣೆಯಾಯಿತು. ಈ ಸಂದರ್ಭದಲ್ಲಿ ತಮಿಳುನಾಡು ಪ್ರತ್ಯೇಕ ರಾಜ್ಯವಾಗಿ ಹೊರಹೊಮ್ಮಿತು’ ಎಂದು ನಟ–ರಾಜಕಾರಣಿ ವಿಜಯ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.