ADVERTISEMENT

ದೆಹಲಿ ಪ್ರಚಾರದಲ್ಲಿ ‘ಗುಂಡಿಕ್ಕಿ ಕೊಲ್ಲಿ’!

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 19:53 IST
Last Updated 27 ಜನವರಿ 2020, 19:53 IST
   

ನವದೆಹಲಿ: ‌ದೆಹಲಿ ವಿಧಾನಸಭಾ ಚುನಾವಣೆಯ ಪ್ರಚಾರ ವೇಳೆ ಹಣಕಾಸು ಖಾತೆ ರಾಜ್ಯಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಪ್ರಚೋದನಕಾರಿ ಘೋಷಣೆ ಕೂಗಿರುವ ವಿಡಿಯೊವೊಂದು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಠಾಕೂರ್ ಅವರು ಚಪ್ಪಾಳೆ ತಟ್ಟುತ್ತಾ ‘ದೇಶದ್ರೋಹಿಗಳನ್ನು’ ಎಂದು ಕೂಗಿದಾಗ, ನೆರೆದಿದ್ದ ಜನರು ‘ಗುಂಡಿಕ್ಕಿ’ ಎಂದು ಪ್ರತಿಕ್ರಿಯಿಸುತ್ತಾರೆ. ಮತ್ತೊಬ್ಬ ಹಿರಿಯ ಸಚಿವ ಗಿರಿರಾಜ್ ಸಿಂಗ್ ಅವರು ಸಹ ಈ ವೇಳೆ ಸ್ಥಳದಲ್ಲಿದ್ದರು. ಸಿಂಗ್ ಅವರಿಗೆ ಕೇಳುವಂತೆ ಮತ್ತಷ್ಟು ಜೋರಾಗಿ ಘೋಷಣೆ ಕೂಗಿ ಎಂದು ಜನರಿಗೆ ಠಾಕೂರ್ ಪ್ರೋತ್ಸಾಹಿಸಿರುವುದು ಸಹ ಕಂಡುಬರುತ್ತದೆ.

ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಈ ಸಭೆಯಲ್ಲಿ ಪಾಲ್ಗೊಳ್ಳುವ ಮೊದಲು ಈ ಘಟನೆ ನಡೆದಿದೆ. ವಿಡಿಯೊ ಕುರಿತು ಟ್ವೀಟ್ ಮಾಡಿರುವ ಸಿಪಿಐ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ‘ಸಂಪುಟ ಎಂದರೆ ಸಾಮೂಹಿಕ ಹೊಣೆಗಾರಿಕೆ. ಕೇಂದ್ರ ಸಚಿವರು ಗುಂಡಿಕ್ಕಲು ಕರೆ ನೀಡುತ್ತಾರೆ. ಪ್ರಧಾನಿ ಮೌನವಾಗಿದ್ದಾರೆ ಎಂದರೆ ಇದಕ್ಕೆ ಅವರ ಒಮ್ಮತ ಇದೆ ಎಂದು ಅರ್ಥವೆ? ಸರ್ಕಾರ ಜನರ ಮಾತನ್ನು ಆಲಿಸಿ ಪೌರತ್ವ (ತಿದ್ದುಪಡಿ)ಕಾಯ್ದೆಯನ್ನು (ಸಿಎಎ) ಹಿಂಪಡೆಯ ಬೇಕು’ ಎಂದಿದ್ದಾರೆ.

ADVERTISEMENT

ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರು ಈ ಕುರಿತು ಟ್ವೀಟ್ ಮಾಡಿದ್ದು, ‘ಅದ್ಭುತ! ಠಾಕೂರ್ ಅವರು ಎಂದಿಗೂ ಆರ್ಥಿಕತೆ, ಉದ್ಯೋಗ, ಬಜೆಟ್ ಕುರಿತು ಮಾತನಾಡಿದ್ದೇ ಕೇಳಿಲ್ಲ. ಬಜೆಟ್ ನಾಗ್ಪುರದಲ್ಲಿ ಸಿದ್ಧವಾಗುವುದರಿಂದ, ಮಂತ್ರಿಗೆ ಮಾಡಲು ಕೆಲಸವಿಲ್ಲ. ಹಾಗಾಗಿ ಜನರಲ್ಲಿ ದ್ವೇಷ ಬಿತ್ತಲು ಬಿಡುವಾಗಿದ್ದಾರೆ!’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.