ADVERTISEMENT

ಪ್ರತಿ ಪೈಸೆಯನ್ನೂ ವಸೂಲು ಮಾಡುವೆ: ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 19:39 IST
Last Updated 1 ಸೆಪ್ಟೆಂಬರ್ 2018, 19:39 IST
ಪ್ರಧಾನಿ ಮೋದಿ
ಪ್ರಧಾನಿ ಮೋದಿ   

ನವದೆಹಲಿ: ದೇಶದ ಬ್ಯಾಂಕ್‌ಗಳನ್ನು ಭೂತಾಕಾರವಾಗಿ ಕಾಡುತ್ತಿರುವ ‘ವಸೂಲಾಗದ ಸಾಲ’ದ (ಎನ್‌ಪಿಎ) ಸಮಸ್ಯೆಗೆ ಹಿಂದಿನ ಯುಪಿಎ ಸರ್ಕಾರವೇ ಹೊಣೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

‘ಯುಪಿಎ ಅವಧಿಯಲ್ಲಿ ಬೇಕಾಬಿಟ್ಟಿಯಾಗಿ ನೀಡಿದ ಸಾಲವನ್ನು ಒಂದು ನಯಾ ಪೈಸಾ ಬಿಡದಂತೆ ಸಾಲ ವಸೂಲು ಮಾಡುತ್ತೇನೆ’ ಎಂದು ಅವರು ಅಬ್ಬರಿಸಿದ್ದಾರೆ.

ಶನಿವಾರ ಅಂಚೆ ಇಲಾಖೆಯ ‘ಪೇಮೆಂಟ್ಸ್‌ ಬ್ಯಾಂಕ್‌’ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ನೆಹರೂ–ಗಾಂಧಿ ಕುಟುಂಬದ ಹೆಸರು ಪ್ರಸ್ತಾಪಿಸದೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಒಂದೇ ಒಂದು ದೂರವಾಣಿ ಕರೆ ಮೂಲಕ ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಕೊಡಿಸುವ ಅನಿಷ್ಟ ಪದ್ಧತಿ ಯುಪಿಎ ಸರ್ಕಾರದ ಅವಧಿಯಲ್ಲಿ ಆರಂಭವಾಗಿತ್ತು ಎಂದರು.

ಆ ಕುಟುಂಬ ಶಿಫಾರಸು ಮಾಡಿದರೆ ಸಾಕು, ಸಾವಿರಾರು ಕೋಟಿ ರೂಪಾಯಿ ಸಾಲ ದೊರೆಯುತ್ತಿತ್ತು. ದೇಶದ ಬ್ಯಾಂಕಿಂಗ್‌ ವಲಯದ ಇಂದಿನ ದುಸ್ಥಿತಿಗೆ ಆ ಅನಿಷ್ಟ ಪದ್ಧತಿಯೇ ಕಾರಣ ಎಂದು ಪ್ರಧಾನಿ ಟೀಕಿಸಿದ್ದಾರೆ.

ದೇಶದ ಹೆಚ್ಚಿನ ಬ್ಯಾಂಕುಗಳು ನೀಡುತ್ತಿದ್ದ ಸಾಲ ಒಂದು ಕುಟುಂಬಕ್ಕೆ ನಿಷ್ಠರಾದ ಮತ್ತು ಆಪ್ತರಾದವರಿಗೆ ಮಾತ್ರ ಮೀಸಲಾಗಿತ್ತು. ಈ ಸಾಲ ಮರಳಿ ಬರುವುದಿಲ್ಲ ಎಂಬ ಸತ್ಯ ಗೊತ್ತಿದ್ದೂ ಆ ಕುಟುಂಬ ತಮ್ಮ ಆಪ್ತರಿಗೆ ಕೋಟ್ಯಂತರ ರೂಪಾಯಿ ಸಾಲ ಕೊಡಿಸಿತ್ತು ಎಂದರು.

ಸ್ವಾತಂತ್ರ್ಯಾನಂತರದಲ್ಲಿ 2008ರ ವರೆಗೆ ಬ್ಯಾಂಕುಗಳು ನೀಡಿದ ಸಾಲದ ಮೊತ್ತ ಕೇವಲ ₹18 ಲಕ್ಷ ಕೋಟಿಯಾಗಿತ್ತು. ಆದರೆ, ಆ ನಂತರ ಕೇವಲ ಆರು ವರ್ಷಗಳ ಅವಧಿಯಲ್ಲಿ ಕುಟುಂಬ ರಾಜಕಾರಣದ ಹಸ್ತಕ್ಷೇಪದಿಂದ ಸಾಲದ ಮೊತ್ತ ₹52 ಲಕ್ಷ ಕೋಟಿಗೆ ಏರಿಕೆಯಾಯಿತು ಎಂದು ದೂರಿದ್ದಾರೆ.

*ವಸೂಲಾಗದ ಸಾಲ ಹೆಚ್ಚಳದಿಂದ ಕಾಂಗ್ರೆಸ್ ಈ ದೇಶದ ಇಡೀ ಆರ್ಥಿಕ ವ್ಯವಸ್ಥೆಯನ್ನು ನೆಲಬಾಂಬ್‌ ಮೇಲೆ ಇಟ್ಟಿತ್ತು.
–ನರೇಂದ್ರ ಮೋದಿ, ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.