ನವದೆಹಲಿ: ಅಸ್ಸಾಂನಲ್ಲಿ ಜಾರಿ ಮಾಡಿದಂತೆ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು(ಎನ್‌ಆರ್‌ಸಿ) ದೇಶದಾದ್ಯಂತ ಜಾರಿ ಮಾಡಲಾಗುವುದು.ಯಾವುದೇ ಧರ್ಮದ ಜನರು ಈ ಬಗ್ಗೆ ಚಿಂತಿಸಬೇಕಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಚಳಿಗಾಲದ ಅಧಿವೇಶನದ ವೇಳೆ ರಾಜ್ಯಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಎನ್‌ಆರ್‌ಸಿ ದೇಶದಲ್ಲಿರುವ ಪೌರರ ಪಟ್ಟಿ ಮಾಡುವ ಪ್ರಕ್ರಿಯೆ ಅಷ್ಟೇ. ದೇಶದಾದ್ಯಂತ ಎನ್‌ಆರ್‌ಸಿ ಜಾರಿ ಮಾಡಲಾಗುವುದು. ಹಾಗೆ ಮಾಡುವಾಗ ಅಸ್ಸಾಂನಲ್ಲಿ ಮತ್ತೊಮ್ಮೆ ಎನ್‌ಆರ್‌ಸಿ ಪಟ್ಟಿ ಸಿದ್ಧಪಡಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ:ದೇಶದೆಲ್ಲೆಡೆ ಎನ್‌ಆರ್‌ಸಿ: ಅಮಿತ್ ಶಾ
ಅಸ್ಸಾಂನಲ್ಲಿ ಎನ್‌ಆರ್‌ಸಿ ಪಟ್ಟಿ ತಯಾರಿಸಿದಾಗ 19 ಲಕ್ಷ ಮಂದಿ ಪಟ್ಟಿಯಿಂದ ಹೊರಗುಳಿದಿದ್ದಾರೆ.ಅಧಿಕಾರಿಗಳ ಪ್ರಕಾರ ಈ ಜನರು ಭಾರತೀಯ ಪೌರರು ಎಂದು ಸಾಬೀತು ಪಡಿಸುವ ಯಾವುದೇ ದಾಖಲೆಯನ್ನು ಸಲ್ಲಿಸಿಲ್ಲ.ಆದಾಗ್ಯೂ ಇವರನ್ನು ಅಕ್ರಮ ವಲಸೆಗಾರರು ಎಂದು ತಕ್ಷಣವೇ ಹೇಳಲಾಗುವುದಿಲ್ಲ ಎಂದು ಸರ್ಕಾರ ಹೇಳಿದೆ. ಹೀಗೆ ಎನ್‌ಆರ್‌ಸಿಯಿಂದ ಹೊರಗುಳಿದಿರುವ ಜನರಿಗೆ ವಿದೇಶಿಯರ ನ್ಯಾಮಮಂಡಳಿಯಲ್ಲಿ ಅರ್ಜಿ ಸಲ್ಲಿಸುವ ಮತ್ತು ನ್ಯಾಯಾಲಯದ ಮೊರೆ ಹೋಗುವ ಅವಕಾಶವಿದೆ.
ಎನ್‌ಆರ್‌ಸಿಯಲ್ಲಿ ಹೆಸರು ಇಲ್ಲದವರು ವಿದೇಶಿಯರ ನ್ಯಾಯಮಂಡಳಿಯ ಮೊರೆ ಹೋಗಬಹುದು. ಅದಕ್ಕಾಗಿ ಅಸ್ಸಾಂ ಸರ್ಕಾರ ಧನ ಸಹಾಯವನ್ನು ನೀಡುತ್ತದೆ ಎಂದು ಶಾ ಹೇಳಿದ್ದಾರೆ.
ಎನ್‌ಆರ್‌ಸಿ ದೇಶದ ಭದ್ರತೆಯ ವಿಷಯವಾಗಿದೆ. ದೇಶದೊಳಗೆ ಅಕ್ರಮ ವಲಸೆಗಾರರಿರುವಾಗ ದೇಶವನ್ನು ಸುಗಮವಾಗಿ ಮುನ್ನಡೆಸಲು ಸಾಧ್ಯವಿಲ್ಲ ಎಂದು ಕೊಲ್ಕತ್ತಾದಲ್ಲಿ ನಡೆದ ರ‍್ಯಾಲಿಯಲ್ಲಿ ಅಮಿತ್ ಶಾ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.