ನವದೆಹಲಿ: ರಾಷ್ಟ್ರೀಯ ಸಾಂಖ್ಯಿಕ ಆಯೋಗದ (ಎನ್‌ಎಸ್‌ಸಿ) ಇಬ್ಬರು ಸದಸ್ಯರ ರಾಜೀನಾಮೆ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿರುವುದರ ಮಧ್ಯೆಯೇ ಕೇಂದ್ರ ಸರ್ಕಾರ ಸ್ಪಷ್ಟೀಕರಣ ನೀಡಿದೆ. ರಾಜೀನಾಮೆ ನೀಡಿರುವ ಇಬ್ಬರು ಸದಸ್ಯರು ಇತ್ತೀಚಿನ ತಿಂಗಳುಗಳಲ್ಲಿ ನಡೆದ ಸಭೆಯಲ್ಲಿ ತಮ್ಮ ಕಳವಳಗಳನ್ನು ಹೇಳಿಕೊಂಡೇ ಇಲ್ಲ ಎಂದು ಸರ್ಕಾರ ಹೇಳಿದೆ.
ಜಿಡಿಪಿ (ಒಟ್ಟು ದೇಶೀ ಉತ್ಪನ್ನ) ಲೆಕ್ಕಾಚಾರ ಬದಲಾವಣೆ ಮತ್ತು ಉದ್ಯೋಗ ಸಮೀಕ್ಷೆಯ ವರದಿ ಬಹಿರಂಗಕ್ಕೆ ವಿಳಂಬದ ಕಾರಣ ಮುಂದಿಟ್ಟು ಇಬ್ಬರು ಸ್ವತಂತ್ರ ಸದಸ್ಯರಾದ ಪಿ.ಸಿ. ಮೋಹನನ್ ಮತ್ತು ಜೆ.ವಿ.ಮೀನಾಕ್ಷಿ ಅವರು ಮಂಗಳವಾರ ರಾಜೀನಾಮೆ ನೀಡಿದ್ದಾರೆ.
‘ಎನ್‌ಎಸ್‌ಸಿಗೆ ರಾಜೀನಾಮೆ ನೀಡಿದ್ದೇನೆ. ಇತ್ತೀಚಿನ ದಿನಗಳಲ್ಲಿ ಆಯೋಗವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಆಯೋಗದ ಹೊಣೆಗಾರಿಕೆಯನ್ನು ನಿರ್ವಹಿಸುವ ಸ್ಥಿತಿಯಲ್ಲಿ ನಾವು ಇಲ್ಲ’ ಎಂದು ಮೋಹನನ್ ಹೇಳಿದ್ದಾರೆ.
ಎನ್‌ಎಸ್‌ಸಿ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಹೇಳಿದೆ.
ಮಾದರಿ ಸಮೀಕ್ಷೆ ರಾಷ್ಟ್ರೀಯ ಸಮಿತಿಯು (ಎನ್‌ಎಸ್‌ಎಸ್‌ಒ) ಉದ್ಯೋಗ ಸಮೀಕ್ಷೆ ನಡೆಸಿದೆ. 2017ರ ಜುಲೈಯಿಂದ 2018ರ ಡಿಸೆಂಬರ್‌ವರೆಗಿನ ದತ್ತಾಂಶವನ್ನು ಎನ್‌ಎಸ್‌ಎಸ್‌ಒ ವಿಶ್ಲೇಷಿಸುತ್ತಿದೆ. ವಿಶ್ಲೇಷಣೆ ಮುಗಿದ ಬಳಿಕ ವರದಿ ಪ್ರಕಟವಾಗಲಿದೆ ಎಂದು ಸಚಿವಾಲಯ ಹೇಳಿದೆ.
ಜಿಡಿಪಿ ಪರಿಷ್ಕರಣೆಗೆ ಎನ್‌ಎಸ್‌ಸಿಯೇ ಸಚಿವಾಲಯಕ್ಕೆ ಸಲಹೆ ನೀಡಿತ್ತು ಎಂದೂ ಸಚಿವಾಲಯ ಸಮಜಾಯಿಷಿ ನೀಡಿದೆ.
2011-12ನೇ ಆರ್ಥಿಕ ವರ್ಷವನ್ನು ಮೂಲವಾಗಿ ಇರಿಸಿಕೊಂಡು ಜಿಡಿಪಿ ಲೆಕ್ಕಾಚಾರ ಹಾಕುವುದಕ್ಕೆ ರಾಷ್ಟ್ರೀಯ ಸಾಂಖ್ಯಿಕ ಲೆಕ್ಕಪತ್ರ ವಿಭಾಗದ ಸಲಹಾ ಮಂಡಳಿಯೇ ಒಪ್ಪಿಗೆ ನೀಡಿತ್ತು ಎಂದು ಸಚಿವಾಲಯ ತಿಳಿಸಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿನ ಅಭಿವೃದ್ಧಿ ಪ್ರಮಾಣ ಮೊದಲು ಅಂದಾಜಿಸಿದಷ್ಟು ಇಲ್ಲ ಎಂದು ಹೊಸ ಲೆಕ್ಕಾಚಾರದ ಮೂಲಕ ಹೇಳಲಾಗಿತ್ತು. ಅದಲ್ಲದೆ, ಯುಪಿಎ ಅವಧಿಗಿಂತ ಈಗಿನ ಎನ್‌ಡಿಎ ಅವಧಿಯಲ್ಲಿ ಆರ್ಥಿಕ ಪ್ರಗತಿ ಹೆಚ್ಚು ಎಂದೂ ಹೇಳಲಾಗಿತ್ತು. ಇದು ರಾಜಕೀಯ ವಾಗ್ವಾದಕ್ಕೆ ಕಾರಣವಾಗಿತ್ತು.
**
ಮತ್ತೊಂದು ಸಂಸ್ಥೆ ಸಾವು: ಕಾಂಗ್ರೆಸ್
ಸರ್ಕಾರದ ದುರುದ್ದೇಶಪೂರಿತ ನಿರ್ಲಕ್ಷ್ಯದಿಂದಾಗಿ ಮತ್ತೊಂದು ಸಂಸ್ಥೆ ಸಾವನ್ನಪ್ಪಿದೆ ಎಂದು ಎನ್‌ಎಸ್‌ಪಿ ಸದಸ್ಯರ ರಾಜೀನಾಮೆಗೆ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಪ್ರತಿಕ್ರಿಯೆ ನೀಡಿದ್ದಾರೆ.
‘ಎನ್‌ಎಸ್‌ಸಿಯ ಸಾವಿಗೆ ನಮ್ಮ ಸಂತಾಪ. ಕಳಂಕರಹಿತವಾದ ಜಿಡಿಪಿ ದತ್ತಾಂಶ ಮತ್ತು ಉದ್ಯೋಗ ದತ್ತಾಂಶ ಪ್ರಕಟಿಸಲು ಅದು ತೋರಿದ ದಿಟ್ಟ ಹೋರಾಟ ನಮ್ಮ ನೆನಪಿನಲ್ಲಿ ಉಳಿಯಲಿದೆ. ಎನ್‌ಎಸ್‌ಸಿಗೆ ಚಿರಶಾಂತಿ ಸಿಗಲಿ, ಎನ್‌ಎಸ್‌ಸಿ ಮತ್ತೆ ಹುಟ್ಟಿ ಬರಲಿ’ ಎಂದು ಚಿದಂಬರಂ ವ್ಯಂಗ್ಯವಾಡಿದ್ದಾರೆ.
ಇಬ್ಬರು ಸದಸ್ಯರ ರಾಜೀನಾಮೆಯಿಂದಾಗಿ ಎಸ್‌ಎಸ್‌ಸಿಯಲ್ಲಿ ಈಗ ಮುಖ್ಯ ಸಾಂಖ್ಯಿಕ ಅಧಿಕಾರಿ ಪ್ರವೀಣ್ ಶ್ರೀವಾಸ್ತವ ಮತ್ತು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಮಾತ್ರ ಸದಸ್ಯರಾಗಿ ಉಳಿದಿದ್ದಾರೆ. ರಾಜೀನಾಮೆ ನೀಡಿದ ಮೋಹನನ್ ಅವರಿಗೆ ಎನ್‌ಎಸ್‌ಸಿಯ ಪ್ರಭಾರ ಅಧ್ಯಕ್ಷ ಹೊಣೆಗಾರಿಕೆಯೂ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.