ಹುಸೈನಿವಾಲಾ:ಪಂಜಾಬ್‌ನ ಗಡಿಯಲ್ಲಿರುವ ಐತಿಹಾಸಿಕ 250 ಅಡಿ ಉದ್ದದ ಹುಸೈನಿವಾಲಸೇತುವೆಯನ್ನು ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ದೇಶಕ್ಕೆ ಸಮರ್ಪಿಸಿದರು.
ಎಡಿಜಿಪಿಯ ವಾಹನದಲ್ಲಿ ಹುಸೈನಿವಾಲಸೇತುವೆ ಮೇಲೆ ಸಂಚಾರ ನಡೆಸುವ ಮೂಲಕ ಲೋಕಾರ್ಪಣೆ ಮಾಡಿದ ಸೀತಾರಾಮನ್, ಸೇತುವೆ ನಿರ್ಮಾಣ ಕಾರ್ಯವನ್ನು ನಿಗಧಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಳಿಸಿರುವ ಗಡಿ ರಸ್ತೆಗಳ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸೇತುವೆಯು ಸೇನೆಯ ವಾಹನಗಳ ಸಂಚಾರ, ಯುದ್ಧ ಸಾಮಗ್ರಿ ಇತರ ವ್ಯವಸ್ಥೆಗಳನ್ನು ಉತ್ತಮವಾಗಿ ಪೂರೈಸಲು ನೆರವಾಗಲಿದೆ.
ಈ ಸೇತುವೆ 1971ರಲ್ಲಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಯುದ್ಧದ ಸಮಯದಲ್ಲಿ ನಾಶವಾಗಿತ್ತು. ಈ ಹುಸೈನಿವಾಲಸೇತುವೆಯು ಫಿರೋಜ್‌ಪುರವನ್ನು ಫಿರೋಜ್‌ಪುರ–ಲಾಹೋರ್ ಹೆದ್ದಾರಿಯಲ್ಲಿ ಸಂಪರ್ಕಿಸುತ್ತದೆ.
ಇದೇ ವೇಳೆ ಇಲ್ಲಿನ ಪವಿತ್ರ ಸ್ಥಳವಾದ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜ್ ಗುರು, ಸುಖದೇವ್ ಅವರ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪಗುಚ್ಚವಿರಿಸಿ ಗೌರವ ನಮನ ಸಲ್ಲಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ತ್ಯಾಗ, ಬಲಿದಾನದ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದ ಈ ಮೂವರು ಸ್ವಾತಂತ್ರ್ಯ ಸೇನಾನಿಗಳ ಅಂತ್ಯಕ್ರಿಯೆಯನ್ನು ಇಲ್ಲಿ 1931ರ ಮಾರ್ಚ್ 23ರಂದು ನೆರವೇರಿಸಲಾಗಿತ್ತು.
ಬಳಿಕ ಸೀತಾರಾಮನ್ ಅವರು, ಅಂತರರಾಷ್ಟ್ರೀಯ ಗಡಿಗೆ ಲೆಫ್ಟಿನೆಂಟ್ ಜನರಲ್ ಸುರೀಂದರ್ ಸಿಂಗ್, ಸೇನೆಯ ಸಿಡಿಆರ್, ಪಶ್ಚಿಮ ವಲಯದ ಕಮಾಂಡರ್ ಜತೆಗೂಡಿ, ಸೇನೆಯ ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರಿಶೀಲಿಸಿದರು. ಎಡಿಜಿಪಿ ಸಿಬ್ಬಂದಿ ಜತೆ ಅವರು ಮುಕ್ತ ಸಂವಾದ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.