ಬೆಂಗಳೂರು: ನ್ಯೂಯಾರ್ಕ್‌ನ ಬ್ರಾಂಕ್ಸ್ ಮೃಗಾಲಯದಲ್ಲಿರುವ 4 ವರ್ಷ ವಯಸ್ಸಿನ ಮಲೇಷ್ಯಾದ ಹುಲಿ 'ನಾಡಿಯಾ'ಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟ ಬೆನ್ನಲೇ ಭಾರತದಲ್ಲಿ ಎಚ್ಚರಿಕೆ ವಹಿಸುವಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಸೋಮವಾರ ಸಂದೇಶ ರವಾನಿಸಿದೆ.
ಹುಲಿ ಸಂರಕ್ಷಣಾ ಪ್ರದೇಶಗಳಿರುವ ದೇಶದ ಎಲ್ಲ ರಾಜ್ಯಗಳ ವನ್ಯಜೀವಿ ಸಂರಕ್ಷಣಾ ಮುಖ್ಯಸ್ಥರಿಗೆ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. ಪಶುವೈದ್ಯಕೀಯ ಸಿಬ್ಬಂದಿ ಹಾಗೂ ಇತರೆ ಸಿಬ್ಬಂದಿ ವನ್ಯಜೀವಿಗಳಲ್ಲಿ ಕೊರೊನಾ ಸೋಂಕಿನ ಬಗ್ಗೆ ಪರೀಕ್ಷೆ ನಡೆಸಬೇಕು ಹಾಗೂ ನಿಯಂತ್ರಣಕ್ಕೆ ಸೂಕ್ತ ಕ್ರಮವಹಿಸುವಂತೆ ಎನ್‌ಟಿಸಿಎ ಅಸಿಸ್ಟೆಂಟ್ ಇನ್‌ಸ್ಪೆಕ್ಟರ್ ಜನರಲ್ ಡಾ.ವೈಭವ್ ಸಿ.ಮಾಥುರ್‌ಪತ್ರದಲ್ಲಿ ತಿಳಿಸಿದ್ದಾರೆ.
ಹುಲಿಗಳಲ್ಲಿ ಉಸಿರಾಟದ ತೊಂದರೆಗಳು, ಕೆಮ್ಮು, ಅಸಹಜ ರೀತಿಯ ಉಸಿರಾಟ ಸೇರಿದಂತೆ ಕೋವಿಡ್–19 ಲಕ್ಷಣಗಳು ಕಂಡು ಬಂದರೆಅರಣ್ಯ ಸಿಬ್ಬಂದಿಗಮನಿಸಬೇಕು. ಕ್ಯಾಮೆರಾ ಟ್ರ್ಯಾಪ್‌ನಿಂದ ಪಡೆದ ದೃಶ್ಯಗಳಿಂದ ಹೊರತಾಗಿ ನೇರವಾಗಿ ಗಮನಿಸಲು ಪ್ರಯತ್ನಿಸುವಂತೆ ತಿಳಿಸಲಾಗಿದೆ.
ವೈರಸ್ ಸೋಂಕು ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದಾಗಿರುವುದರಿಂದ ಎಚ್ಚರವಹಿಸಬೇಕಿದೆ. ಹುಲಿಗಳು ಸತ್ತರೆ, ಅದರ ಕುರಿತು ವಿವರವಾದ ಮಾಹಿತಿ ದಾಖಲಿಸುವುದನ್ನು ಅನುಸರಿಸಬೇಕಿದೆ. ಮರಣೋತ್ತರ ಪರೀಕ್ಷೆಯಲ್ಲಿ ಸ್ಥಳ, ವಯಸ್ಸು, ಪ್ರಾಣಿಯ ಲಿಂಗ ದಾಖಲಿಸುವ ಜೊತೆಗೆ ರಾಜ್ಯದ ಪಶುವೈದ್ಯಕೀಯ ಅಧಿಕಾರಗಳನ್ನು ಸಂಪರ್ಕಿಸಿ ಕೊರೊನಾ ಸೋಂಕು ಪರೀಕ್ಷೆಗೆ ಪ್ರಾಣಿಗಳಿಂದ ಮಾದರಿ ಸಂಗ್ರಹಿಸುವಂತೆ ಸೂಚಿಸಲಾಗಿದೆ.
ಕೊರೊನಾ ವೈರಸ್ ಸೋಂಕು ಹುಲಿಗಳ ಬಾಯಿ, ಕರುಳು, ಹೊಟ್ಟೆ ಸೇರಿ ಇಡೀ ಜೀರ್ಣಾಂಗ (ಗ್ಯಾಸ್ಟ್ರೋಇನ್ಟೆಸ್ಟೈನಲ್ ) ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದಾಗಿದೆ. ಹಾಗೇ ಉಸಿರಾಟ ಸಮಸ್ಯೆ ಲಕ್ಷಣಗಳ ಬಗ್ಗೆಯೂ ಪರೀಕ್ಷೆ ನಡೆಸುವಂತೆ ಎನ್‌ಟಿಸಿಎ ಅಧಿಸೂಚನೆಯಲ್ಲಿ ತಿಳಿಸಿದೆ.
ಸೋಂಕು ಲಕ್ಷಣಗಳು ಕಂಡು ಬಂದ ಪ್ರಕರಣಗಳ ಬಗ್ಗೆ ಎನ್‌ಟಿಸಿಎಗೆ ತಿಳಿಸುವುದರೊಂದಿಗೆ ಐಸಿಎಆರ್ ಅನುಮೋದಿತ ಪ್ರಯೋಗಾಲಯಗಳಿಗೆ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸುವಂತೆ ರಾಜ್ಯಗಳಿಗೆ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.