ADVERTISEMENT

ಅನಧಿಕೃತ ಪ್ರವಾಸೋದ್ಯಮ: ಅರಣ್ಯಾಧಿಕಾರಿಗಳ ವಿರುದ್ಧ ತನಿಖೆಗೆ NTCA ಆದೇಶ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 15:55 IST
Last Updated 22 ನವೆಂಬರ್ 2024, 15:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಾಳಿ ಹುಲಿ ಮೀಸಲು ಅರಣ್ಯದ ನೀಲಿಗುಂಡಿ ಜಲಪಾತ ಪ್ರದೇಶದಲ್ಲಿ ಅನಧಿಕೃತ ಪ್ರವಾಸೋದ್ಯಮಕ್ಕೆ ಅವಕಾಶ ನೀಡಿ ಸಾಕ್ಷ್ಯ ನಾಶ ಮಾಡಿರುವ ಆರೋಪದ ಕುರಿತು ತನಿಖೆ ನಡೆಸಿ ಶೀಘ್ರದಲ್ಲೇ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು (ಎನ್‌ಟಿಸಿಎ) ರಾಜ್ಯದ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸೂಚನೆ ನೀಡಿದೆ.

ನೀಲಿಗುಂಡಿ ಜಲಪಾತ ಪ್ರವಾಸೋದ್ಯಮ ವಲಯದಲ್ಲಿ ಬರುವುದಿಲ್ಲ. ಹೀಗಿದ್ದರೂ ಇಲ್ಲಿ ಸಾವಿರಾರು ಪ್ರವಾಸಿಗರು ಭೇಟಿ ನೀಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಡಿಯೊಗಳು ಹರಿದಾಡಿದ್ದವು. ಅರಣ್ಯ ಇಲಾಖೆಯೇ ಇಲ್ಲಿ ಪ್ರವಾಸಿಗರಿಂದ ಪ್ರವೇಶ ಶುಲ್ಕ ವಸೂಲಿ ಮಾಡುವ ವಿಡಿಯೊ ಹರಿದಾಡಿತ್ತು. ಜಲಪಾತವಿರುವ ಅಣಶಿ- ಕದ್ರಾ ರಸ್ತೆಯ ಬದಿಯಲ್ಲೇ ಬ್ಲೂ ವಾಟರ್‌ ಫಾಲ್ಸ್‌ ಎಂಬ ನಾಮಫಲಕವನ್ನು ಇಲಾಖೆ ಅಳವಡಿಸಿತ್ತು. ಇದಕ್ಕೆ ಸ್ಥಳೀಯರು ಆಕ್ಷೇಪಿಸಿ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಜಲಪಾತ ಪ್ರದೇಶದಲ್ಲಿ ಪ್ರವಾಸಿಗರಿಗೆ ಅವಕಾಶ ನೀಡಿಲ್ಲ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದರು.

ನೀಲಿ ಜಲಪಾತ ಪ್ರದೇಶದಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ವಿಡಿಯೊ ಒಂದನ್ನು ಇಲಾಖೆಯ ಇನ್‌ಸ್ಟಾಗ್ರಾಮ್‌ ಖಾತೆ ಮೂಲಕ ಪ್ರಚಾರ ಮಾಡಲಾಗಿತ್ತು. ಜಲಪಾತ ಪ್ರದೇಶದಲ್ಲಿ ಈಜಾಡಲು ಅವಕಾಶ ಇದೆ ಎಂದು ಈ ವಿಡಿಯೊದಲ್ಲಿ ಹೇಳಲಾಗಿತ್ತು. ಸ್ಥಳೀಯರ ಆಕ್ಷೇಪದ ನಂತರ ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್ ಖಾತೆಯಿಂದ ಅಳಿಸಿ ಹಾಕಲಾಗಿತ್ತು. ಅಧಿಕಾರಿಗಳು ಈ ಹಿಂದೆ ಶೇರ್ ಮಾಡಿದ್ದ ವಿಡಿಯೊ ಮತ್ತು ಅಳಿಸಿ ಹಾಕಿರುವ ಎಲ್ಲ ಸ್ಕ್ರೀನ್ ಶಾಟ್‌ಗಳ ಸಮೇತ ಎನ್‌ಟಿಸಿಎಗೆ ಸ್ಥಳೀಯರು ದೂರು ಸಲ್ಲಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.