ನವದೆಹಲಿ: ಆಯುಷ್ಮಾನ್ ಭಾರತ್ ಫಲಾನುಭವಿಗಳ ಸಂಖ್ಯೆ ಒಂದು ಕೋಟಿ ದಾಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
ಯೋಜನೆಯು ಅನೇಕರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಹೇಳಿರುವ ಅವರು, ಒಂದು ಕೋಟಿ ಸಂಖ್ಯೆ ತಲುಪಿದ ವೇಳೆ ಫಲಾನುಭವಿಯಾದ ಮೇಘಾಲಯದ ಪೂಜಾ ಥಾಪಾ ಅವರ ಜತೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದಾರೆ.
2018ರ ಸೆಪ್ಟೆಂಬರ್‌ನಲ್ಲಿ ಮೋದಿ ಅವರು ‘ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ–ಆಯುಷ್ಮಾನ್ ಭಾರತ್’ಗೆ ಚಾಲನೆ ನೀಡಿದ್ದರು. ಇದು ವಿಶ್ವದಲ್ಲೇ ಅತಿ ದೊಡ್ಡ ಸರ್ಕಾರಿ ಪ್ರಾಯೋಜಿತ ಆರೋಗ್ಯ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದನ್ನೂ ಓದಿ: ‘ಆಯುಷ್ಮಾನ್ ಭಾರತ್’ ಘೋಷಿಸಿದ ಪ್ರಧಾನಿ; ಏನಿದು ಯೋಜನೆ?
‘ಆಯುಷ್ಮಾನ್ ಭಾರತ್ ಫಲಾನುಭವಿಗಳ ಸಂಖ್ಯೆ ಒಂದು ಕೋಟಿ ದಾಟಿರುವುದು ಪ್ರತಿಯೊಬ್ಬ ಭಾರತೀಯನನ್ನೂ ಹೆಮ್ಮೆಪಡುವಂತೆ ಮಾಡಿದೆ. ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಯೋಜನೆಯು ಅನೇಕರ ಬಾಳಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಎಲ್ಲ ಫಲಾನುಭವಿಗಳು, ಅವರ ಕುಟುಂಬದವರನ್ನು ಅಭಿನಂದಿಸಿದ ಪ್ರಧಾನಿ, ಯೋಜನೆಯ ಯಶಸ್ಸಿಗೆ ಶ್ರಮಿಸುತ್ತಿರುವ ವೈದ್ಯರು, ಶುಷ್ರೂಶಕಿಯರು, ಆರೋಗ್ಯ ಕಾರ್ಯಕರ್ತರಿಗೆ ಉತ್ತಮ ಆರೋಗ್ಯ ದೊರೆಯಲೆಂದು ಪ್ರಾರ್ಥಿಸುವುದಾಗಿ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇವರೆಲ್ಲರ ಶ್ರಮದಿಂದಲೇ ಜಗತ್ತಿನ ಅತಿದೊಡ್ಡ ಆರೋಗ್ಯ ಯೋಜನೆ ಯಶಸ್ವಿಯಾಗುತ್ತಿದೆ ಎಂದೂ ಹೇಳಿದ್ದಾರೆ.
‘ಈ ಯೋಜನೆಯು ಅನೇಕ ಭಾರತೀಯರ ವಿಶ್ವಾಸ ಗಳಿಸಿದೆ. ವಿಶೇಷವಾಗಿ ಬಡವರು ಮತ್ತು ದೀನರಿಗೆ ನೆರವಾಗಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.