ಮಹಾರಾಜ್‌ಗಂಜ್ (ಉತ್ತರ ಪ್ರದೇಶ): ರಾಜ್ಯದಲ್ಲಿ ಪ್ರಸ್ತಕ ವರ್ಷದಲ್ಲಿ 17 ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗಿದ್ದು, ಎಂಬಿಬಿಎಸ್ ಸೀಟುಗಳ ಸಂಖ್ಯೆ ದ್ವಿಗುಣಗೊಂಡಿದೆ. ಈ ಮೂಲಕ ವೈದ್ಯಕೀಯ ಶಿಕ್ಷಣವನ್ನು ಬಲಪಡಿಸಲಾಗುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಮಹಾರಾಜಗಂಜ್ ಜಿಲ್ಲೆಯ ಕೆಎಂಸಿ ವೈದ್ಯಕೀಯ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಇಲ್ಲಿಯವರೆಗೆ ಉತ್ತರ ಪ್ರದೇಶದಲ್ಲಿ ಸುಮಾರು 5.14 ಕೋಟಿ ಹಿಂದುಳಿದ ಸಮುದಾಯಕ್ಕೆ ಸೇರಿದ ಜನರು ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಗೋರಖ್‌ಪುರದಲ್ಲಿ ಏಮ್ಸ್ ಸ್ಥಾಪನೆಯೊಂದಿಗೆ ಕುಶಿನಗರ, ಡಿಯೋರಿಯಾ, ಬಸ್ತಿ, ಸಿದ್ಧಾರ್ಥನಗರ, ಗೊಂಡಾ, ಬಹ್ರೈಚ್, ಸುಲ್ತಾನ್‌ಪುರ, ಅಂಬೇಡ್ಕರ್‌ನಗರ, ಅಯೋಧ್ಯೆ, ಪ್ರತಾಪ್‌ಗಢದಲ್ಲಿ ವೈದ್ಯಕೀಯ ಕಾಲೇಜುಗಳು ಪ್ರಾರಂಭಗೊಂಡಿವೆ’ ಎಂದು ಹೇಳಿದರು.
‘ಉತ್ತರ ಪ್ರದೇಶವು ಒಂದು ಕಾಲದಲ್ಲಿ ಕೇವಲ 18 ವೈದ್ಯಕೀಯ ಕಾಲೇಜುಗಳನ್ನು ಹೊಂದಿತ್ತು. ಆದರೆ, ಇಂದು 64 ಜಿಲ್ಲೆಗಳಲ್ಲಿ ಆರೋಗ್ಯ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ‘ಒಂದು ಜಿಲ್ಲೆ, ಒಂದು ವೈದ್ಯಕೀಯ ಕಾಲೇಜು’ ಎಂಬ ಸಂಕಲ್ಪವನ್ನು ಈಡೇರಿಸುತ್ತೇವೆ. ಉಳಿದ 6–7 ಜಿಲ್ಲೆಗಳಲ್ಲಿ ಹೊಸ ನೀತಿಯೊಂದಿಗೆ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುವುದು’ ಎಂದು ಆದಿತ್ಯನಾಥ್ ತಿಳಿಸಿದ್ದಾರೆ.
‘ಹೊಸ ವೈದ್ಯಕೀಯ ಕಾಲೇಜುಗಳಿಗೆ ಉತ್ತಮ ಸಂಪರ್ಕವನ್ನು ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಹೆಚ್ಚುವರಿಯಾಗಿ, ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು ರಾಜ್ಯಾದ್ಯಂತ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.