ADVERTISEMENT

ಹೆಚ್ಚಿದ ಮಹಿಳಾ ಪ್ರಾತಿನಿಧ್ಯ; ಇಳಿದ ಸರಾಸರಿ ವಯಸ್ಸು

​ಪ್ರಜಾವಾಣಿ ವಾರ್ತೆ
Published 29 ಮೇ 2019, 19:45 IST
Last Updated 29 ಮೇ 2019, 19:45 IST
   

ನವದೆಹಲಿ:ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇನ್ನಷ್ಟು ಹೊಸಬರು ಆಯ್ಕೆಯಾಗಿ ಸಂಸತ್ತನ್ನು ಪ್ರವೇಶಿಸಿದ್ದಾರೆ. ಹೊಸಬರ ಪ್ರವೇಶದಿಂದ ಸಂಸದರ ಸರಾಸರಿ ವಯಸ್ಸು ಇಳಿಕೆಯಾಗಿದೆ.

17ನೇ ಲೋಕಸಭೆಯ ಶೇ 12ರಷ್ಟು ಸದಸ್ಯರ ವಯಸ್ಸು 40 ವರ್ಷಕ್ಕೂ ಕಡಿಮೆ ಇದೆ. ಈ ಬಾರಿ 78 ಮಹಿಳೆಯರು ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಇದು ಈವರೆಗಿನ ಗರಿಷ್ಠ ಪ್ರಮಾಣವಾಗಿದೆ

2014ರ ಲೋಕಸಭೆ ಚುನಾವಣೆಯಲ್ಲಿ 61 ಮಹಿಳೆಯರು ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿದ್ದರು. ನಂತರ ನಡೆದ ಉಪ ಚುನಾವಣೆಗಳ ಬಳಿಕ ಲೋಕಸಭೆಯಲ್ಲಿರುವ ಸಂಸದೆಯರ ಸಂಖ್ಯೆ 65ಕ್ಕೆ ತಲುಪಿತ್ತು.

ADVERTISEMENT

1957ರಲ್ಲಿ ಅತಿ ಕಡಿಮೆ, ಅಂದರೆ 22 ಸಂಸದೆಯರು ಮಾತ್ರ ಲೋಕಸಭೆಯಲ್ಲಿದ್ದರು. 1999ರಲ್ಲಿ 49, 2004ರಲ್ಲಿ 45, 2009ರಲ್ಲಿ 59 ಮಹಿಳೆಯರು ಲೋಕಸಭೆಗೆ ಆಯ್ಕೆಯಾಗಿದ್ದರು.

ಈ ಬಾರಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನೇ ಸೋಲಿಸಿರುವುದು ದೇಶದ ಗಮನ ಸೆಳೆದಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿಯ ಪ್ರಜ್ಞಾ ಠಾಕೂರ್, ಮನೇಕಾ ಗಾಂಧಿ, ಎನ್‌ಸಿಪಿಯ ಸುಪ್ರಿಯಾ ಸುಳೆ, ಡಿಎಂಕೆಯ ಕನಿಮೋಳಿ ಮತ್ತು ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಇವರು ಸಂಸತ್ ಪ್ರವೇಶಿಸಿದ ಇತರ ಪ್ರಮುಖ ಮಹಿಳೆಯರು.

ವಡೋದರಾ ಕ್ಷೇತ್ರದಲ್ಲಿ ಬಿಜೆಪಿಯ ರಂಜನಾಬೆನ್ ಭಟ್ ಅವರು 5,89,177 ಮತಗಳೊಂದಿಗೆ ಜಯ ಗಳಿಸಿದ್ದು, ಮಹಿಳಾ ಅಭ್ಯರ್ಥಿಗಳ ಪೈಕಿ ಹೆಚ್ಚು ಮತ ಗಳಿಸಿದವರಾಗಿದ್ದಾರೆ. ಟಿಎಂಸಿಯು ಶೇ 40.5ರಷ್ಟು ಮಹಿಳಾ (17/42) ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಡಿ ಶೇ 33ರಷ್ಟು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಕಾಂಗ್ರೆಸ್‌ ಪಕ್ಷದಿಂದ ಐವರು ಮಹಿಳೆಯರು ಜಯಗಳಿಸಿದ್ದರೆ, ವೈಎಸ್‌ಆರ್‌ ಕಾಂಗ್ರೆಸ್‌ನಿಂದ ನಾಲ್ವರು ಗೆದ್ದಿದ್ದಾರೆ. ಅಕಾಲಿದಳ, ಶಿವಸೇನಾ, ಎನ್‌ಸಿಪಿ, ಅಪ್ನಾ ದಳ, ಎನ್‌ಪಿಪಿ ಮತ್ತು ಬಿಎಸ್‌ಪಿಗಳು ತಲಾ ಒಬ್ಬ ಸಂಸದೆಯರನ್ನು ಹೊಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.