ಮುಂಬೈ: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಆಟೊ ಚಾಲಕನೊಬ್ಬ ನರ್ಸಿಂಗ್ ವಿದ್ಯಾರ್ಥಿನಿಗೆ, ಅಮಲು ಬರಿಸುವ ಅಂಶ ಮಿಶ್ರಣ ಮಾಡಿದ್ದ ನೀರು ಕುಡಿಸಿ, ಅತ್ಯಾಚಾರ ಎಸಗಿದ್ದಾನೆ.
ವಿದ್ಯಾರ್ಥಿನಿ ಮೇಲಿನ ಈ ಕೃತ್ಯಕ್ಕೆ ನರ್ಸಿಂಗ್ ವಿದ್ಯಾರ್ಥಿಗಳು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿಸಿದ್ದಾರೆ.
ರಾಜ್ಯದ ಠಾಣೆ ಜಿಲ್ಲೆಯ ಬದ್ಲಾಪುರದಲ್ಲಿ ಇಬ್ಬರು ನರ್ಸರಿ ವಿದ್ಯಾರ್ಥಿನಿಯರ ಮೇಲೆ ಇತ್ತೀಚೆಗೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಅದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಕೃತ್ಯ ನಡೆದ ನಂತರ ಮಹಾರಾಷ್ಟ್ರ ಸರ್ಕಾರ ಇರಿಸುಮುರಿಸಿಗೆ ಒಳಗಾಗಿತ್ತು. ಅದರ ಬೆನ್ನಲ್ಲೇ ಮತ್ತೊಂದು ಕೃತ್ಯ ನಡೆದಿದೆ.
ವರದಿ ಪ್ರಕಾರ, ನರ್ಸಿಂಗ್ ವಿದ್ಯಾರ್ಥಿನಿ ತನ್ನ ಮನೆಗೆ ತೆರಳಲು ಆಟೊ ಏರಿದ್ದಳು. ಮಾರ್ಗದಲ್ಲಿ ಅಮಲು ಬರಿಸುವ ಅಂಶ ಮಿಶ್ರಣ ಮಾಡಿದ್ದ ನೀರನ್ನು ಆಟೊ ಚಾಲಕ ನೀಡಿದ್ದ. ಬಳಿಕ ಪ್ರಜ್ಞೆ ತಪ್ಪಿದ್ದ ವಿದ್ಯಾರ್ಥಿನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೃತ್ಯ ಎಸಗಿ, ಅಲ್ಲೇ ಬಿಟ್ಟು ಪರಾರಿಯಾಗಿದ್ದ.
ವಿದ್ಯಾರ್ಥಿನಿಯನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ‘ಆರೋಪಿಯ ಪತ್ತೆಗೆ ಮಹಿಳಾ ಅಧಿಕಾರಿಯ ನೇತೃತ್ವದಲ್ಲಿ 11 ಸದಸ್ಯರ ತಂಡವನ್ನು ರಚಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ್ ಕುಲಕರ್ಣಿ ಅವರು ತಿಳಿಸಿದ್ದಾರೆ.
ತನಿಖೆಯ ಭಾಗವಾಗಿ ಪೊಲೀಸರು ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಗಳನ್ನು ವಶಕ್ಕೆ ಪಡೆದಿದ್ದಾರೆ.
ಸುಪ್ರಿಯಾ ಸುಳೆ ಖಂಡನೆ: ನರ್ಸರಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿದ್ದವನ ವಿರುದ್ಧ ಕ್ರಮಕ್ಕೆ ಆಗ್ರಹಪಡಿಸಿದ ಪೋಷಕರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸುತ್ತಿದ್ದರೆ, ಇತ್ತ ಅತ್ಯಾಚಾರಿಗಳು ನಿರ್ಭಯವಾಗಿ ಕೃತ್ಯ ಎಸಗುತ್ತಿದ್ದಾರೆ ಎಂದು ಸಂಸದೆ ಸುಪ್ರಿಯಾ ಸುಳೆ ಟೀಕಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯು ಪೂರ್ಣವಾಗಿ ಕುಸಿದಿದೆ. ಇಂಥ ಕೃತ್ಯಗಳು ನಡೆದ ಬಳಿಕ ಪ್ರತಿಕ್ರಿಯಿಸುವ ಬದಲಿಗೆ, ಕಡಿವಾಣ ಹಾಕಲು ಕಠಿಣ ಮತ್ತು ಸ್ಪಷ್ಟ ನೀತಿ ರೂಪಿಸಲು ಸರ್ಕಾರ ಮುಂದಾಗಬೇಕು ಎಂದು ಎನ್‌ಸಿಪಿ (ಎಸ್‌ಪಿ) ಕಾರ್ಯಾಧ್ಯಕ್ಷೆಯೂ ಆದ ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.