ಪತ್ತನಂತಿಟ್ಟ (ಕೇರಳ): ನರ್ಸಿಂಗ್ ವಿದ್ಯಾರ್ಥಿನಿಯೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿನಿಯರನ್ನು ಪೊಲೀಸರು ಬಂಧಿಸಿದ್ದಾರೆ.
ನವೆಂಬರ್ 15ರಂದು ಪತ್ತನಂತಿಟ್ಟ ಜಿಲ್ಲೆಯ ಚುಟ್ಟಿಪ್ಪಾರದಲ್ಲಿರುವ ಎಸ್‌ಎಂಇ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಂತಿಮ ವರ್ಷದ ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿನಿ ಅಮ್ಮು ಸಜೀವ್ ಎಂಬುವವರು ಹಾಸ್ಟೆಲ್ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಸಹಪಾಠಿಗಳಾದ ಮೂವರು ವಿದ್ಯಾರ್ಥಿನಿಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ ಮಗಳಿಗೆ ಸಹಪಾಠಿಗಳು ಮಾನಸಿಕ ಹಿಂಸೆ ನೀಡುತ್ತಿದ್ದು, ಆಕೆಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ವಿದ್ಯಾರ್ಥಿನಿಯ ತಂದೆ ಸಜೀವ್ ಅವರು ಈ ಹಿಂದೆ ಕಾಲೇಜು ಪ್ರಾಂಶುಪಾಲರಿಗೆ ದೂರು ನೀಡಿದ್ದರು. ದೂರಿನಲ್ಲಿ ಹೆಸರಿಸಲಾದ ವಿದ್ಯಾರ್ಥಿನಿಯರನ್ನು ಗುರುವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಅವರಲ್ಲಿ ಇಬ್ಬರು ವಿದ್ಯಾರ್ಥಿನಿಯರು ಕೋಟಯಂ ಮೂಲದವರಾಗಿದ್ದು, ಒಬ್ಬರು ಕೊಲ್ಲಂ ಮೂಲದವರಾಗಿದ್ದಾರೆ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.