ಕೋಲ್ಕತ್ತ: ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಬೆಂಗಾಲಿ ನಟಿ ಮತ್ತು ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಸೋಮವಾರ ಸಂಜೆ ಬಿಡುಗಡೆಗೊಂಡಿದ್ದಾರೆ. ಅತಿಯಾದ ನಿದ್ದೆ ಮಾತ್ರೆ ಸೇವಿಸಿದ್ದರಿಂದ ಹೀಗಾಗಿದೆ ಎನ್ನುವುದು ವದಂತಿ ಎಂದು ಕುಟುಂಬಸ್ಥರು ಹೇಳಿದ್ದಾರೆ.
ನುಸ್ರತ್‌ಗೆ ಉಸಿರಾಟದ ಸಮಸ್ಯೆಯಾಗಿತ್ತು ಹೊರತು ಯಾವುದೇ ಅತಿಯಾದ ಔಷಧದಿಂದಲ್ಲ. ಈಗ ನುಸ್ರತ್ ಹುಷಾರಾಗಿದ್ದು, ಬುಧವಾರದಿಂದ ತನ್ನ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ನುಸ್ರತ್ ಏಕೆ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನುವ ಕುರಿತು ಮಾಹಿತಿ ನೀಡಲು ಅಪೋಲೊ ಗ್ಲೆನೆಗ್ಲೆಸ್ ಆಸ್ಪತ್ರೆಯು ನಿರಾಕರಿಸಿದೆ. ಟೀಂ ನುಸ್ರತ್ ಜಹಾನ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಈ ಹಿಂದಿನಿಂದಲೂ ಅಸ್ತಮಾ ಹೊಂದಿದ್ದ ನುಸ್ರತ್ ಭಾನುವಾರ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಿದೆ.
ಭಾನುವಾರ ಆಸ್ಪತ್ರೆಗೆ ದಾಖಲಾಗುವ ಕೆಲವೇ ಗಂಟೆಗಳ ಮುಂದೆ ತನ್ನ ಪತಿ ನಿಖಿಲ್ ಜೈನ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು. ಆಸ್ಪತ್ರೆ ಸೇರಿರುವ ವಿಚಾರ ತಿಳಿದ ಕೂಡಲೇ ಅಭಿಮಾನಿಗಳು ನೆಚ್ಚಿನ ನಟಿ ಆದಷ್ಟು ಬೇಗ ಹುಷಾರಾಗಲಿ ಎಂದು ಪ್ರಾರ್ಥಿಸಿ ಪೋಸ್ಟ್ ಹಂಚಿಕೊಂಡಿದ್ದರು.
ಹುಟ್ಟುಹಬ್ಬದ ಪಾರ್ಟಿ ವೇಳೆ ನುಸ್ರತ್, ಅತಿಹೆಚ್ಚು ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡಿರುವುದರಿಂದಾಗಿ ಆಸ್ಪತ್ರೆ ಸೇರಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು.
ನಟಿಯಾಗಿದ್ದ ನುಸ್ರತ್ ತೃಣಮೂಲ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಬಸಿರ್ಹತ್ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿ ಸಂಸತ್ ಪ್ರವೇಶಿಸಿ ಸುದ್ದಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.