ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಘೋಷಿಸಿರುವ, ಬಡವರಿಗೆ ವಾರ್ಷಿಕ ₹ 72 ಸಾವಿರ ಸಹಾಯಧನ ನೀಡುವ ‘ನ್ಯಾಯ್’ ಯೋಜನೆಯ ಭರವಸೆಯು ಸುಭಾಸ್‌ಚಂದ್ರ ಬೋಸ್ ಮತ್ತು ರಾಹುಲ್ ಅವರ ಅಜ್ಜ ಜವಾಹರಲಾಲ್ ನೆಹರೂ ಅವರು 80 ವರ್ಷಗಳ ಹಿಂದೆ ನಡೆಸಿದ್ದ ಚಿಂತನೆಯ ಫಲವೇ?
ನೆಹರೂ ಅವರ ‘ಡಿಸ್ಕವರಿ ಆಫ್ ಇಂಡಿಯಾ’ ಹಾಗೂ ಪತ್ರಕರ್ತ ಎಂ. ಚಲಪತಿ ರಾವ್ ಅವರು ಬರೆದ ನೆಹರೂ ಜೀವನಚರಿತ್ರೆ ‘ಜವಾಹರಲಾಲ್ ನೆಹರೂ’ ಕೃತಿಗಳಲ್ಲಿ ಈ ಬಗ್ಗೆ ಒಂದಿಷ್ಟು ಮಾಹಿತಿ ಲಭ್ಯವಾಗುತ್ತದೆ.
1938ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸುಭಾಸ್‌ಚಂದ್ರ ಬೋಸ್ ಅವರು, ಜನರಿಗೆ ಕನಿಷ್ಠ ಘನತೆಯ ಜೀವನವನ್ನು ಖಚಿತಪಡಿಸುವ ಸಲುವಾಗಿ ಯೋಜನೆ ರೂಪಿಸಲು ನೆಹರೂ ಅಧ್ಯಕ್ಷತೆಯಲ್ಲಿ ‘ರಾಷ್ಟ್ರೀಯ ಯೋಜನಾ ಸಮಿತಿ’ಯನ್ನು ರಚಿಸಿದ್ದರು. ರಾಹುಲ್ ಗಾಂಧಿ ಘೋಷಿಸಿರುವ ‘ನ್ಯಾಯ್’ ಯೋಜನೆಯಲ್ಲಿ ಬಡವರಿಗೆ ವಾರ್ಷಿಕ ₹ 72 ಸಾವಿರ ಸಹಾಯಧನ ನೀಡುವ ಉಲ್ಲೇಖ ಮಾಡಿದ್ದಾರೆ. ಘನತೆಯ ಜೀವನ ನಡೆಸಲು ಜನರಿಗೆ ಕನಿಷ್ಠ ವಾರ್ಷಿಕ ₹ 216 ರಿಂದ ₹ 300 ಬೇಕು ಎಂಬುದನ್ನುನೆಹರೂ ಅವರು 1940ರ ದಶಕದಲ್ಲೇ ಮನಗಂಡಿದ್ದರು. ಆದರೆ, ಈ ಸಮಿತಿಯು ಸಮಗ್ರ ವರದಿಯನ್ನು ಸಿದ್ಧಪಡಿಸುವುದಕ್ಕೂ ಮುನ್ನ ‘ಕ್ವಿಟ್ ಇಂಡಿಯಾ’ ಚಳವಳಿ ಆರಂಭವಾಗಿ, ನೆಹರೂ ಹಾಗೂ ಇತರ ನಾಯಕರು ಬಂಧನಕ್ಕೊಳಗಾದರು.
ಬೋಸ್ ಅವರು ರಚಿಸಿದ ಈ ಸಮಿತಿಯು ಗಾಂಧೀಜಿ ಪ್ರತಿಪಾದಿಸುತ್ತಿದ್ದ ಆರ್ಥಿಕ ನೀತಿಯನ್ನು ಒಪ್ಪಿಕೊಂಡಿರಲಿಲ್ಲ. ಗಾಂಧೀಜಿಯ ‘ಗೃಹೋದ್ಯಮ’ದ ತತ್ವವನ್ನು ಬೋಸ್ ಒಪ್ಪುತ್ತಿರಲಿಲ್ಲ. ಬದಲಿಗೆ ಅವರು ಔದ್ಯಮೀಕರಣವನ್ನು ಪ್ರತಿಪಾದಿಸುತ್ತಿದ್ದರು. ನೆಹರೂ ಅವರಲ್ಲೂ ಇದೇ ಭಾವನೆ ಇತ್ತು. ಸಮಿತಿಯ ಸದಸ್ಯರಿಗೆ ಬರೆದಿದ್ದ ಪತ್ರವೊಂದರಲ್ಲಿ ನೆಹರೂ, ‘ಕಾಂಗ್ರೆಸ್ ಗೃಹೋದ್ಯಮಗಳನ್ನು ಪ್ರೋತ್ಸಾಹಿಸುತ್ತದೆ. ಆದರೆ, ಉದ್ದಿಮೆಗಳನ್ನು ವಿರೋಧಿಸುವುದಿಲ್ಲ’ ಎಂದಿದ್ದರು.
ರಾಷ್ಟ್ರೀಯ ಯೋಜನಾ ಸಮಿತಿಯು ತನ್ನ ಉಪಸಮಿತಿಗಳಿಗೆ ಬರೆದ ಪತ್ರವೊಂದರಲ್ಲಿ, ‘ಕನಿಷ್ಠ ಘನತೆಯ ಜೀವನವೆಂದರೆ ‘ಜೀವನಾವಶ್ಯಕ ಅಂಶಗಳ ಜೊತೆಗೆ ಒಂದಿಷ್ಟು ಸೌಲಭ್ಯ ಹಾಗೂ ಸೌಕರ್ಯಗಳನ್ನು ಒಳಗೊಂಡಿರಬೇಕು’ ಎಂದು ಹೇಳಿತ್ತು.
‘ಈಗಿನ ರೂಪಾಯಿ ಮೌಲ್ಯದ ಆಧಾರದಲ್ಲಿ ದೇಶದ ಬೇರೆಬೇರೆ ಭಾಗಗಳಲ್ಲಿ ಜೀವನಾವಶ್ಯಕ ತಲಾ ಆದಾಯವು ತಿಂಗಳಿಗೆ ಕನಿಷ್ಠ ₹ 18 ರಿಂದ ₹25 ಇರಬೇಕು ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಇಲ್ಲಿ ಅನುಕೂಲಕ್ಕಾಗಿ ಹಣವನ್ನು ಪರಿಮಾಣವಾಗಿ ಬಳಸಿದ್ದೇವೆ. ವಾಸ್ತವದಲ್ಲಿ ಜೀವನಾವಶ್ಯಕ ಅಂಶಗಳನ್ನು ಸರಕು ಮತ್ತು ಸೇವೆಗಳ ಆಧಾರದಲ್ಲಿ ಲೆಕ್ಕಹಾಕಬೇಕು’ ಎಂದೂ ಸಮಿತಿ ಹೇಳಿತ್ತು.
ಆ ಕಾಲದಲ್ಲಿ ವಾರ್ಷಿಕ ತಲಾವಾರು ಸರಾಸರಿ ಆದಾಯವನ್ನು ₹ 65 ಎಂದು ಅಂದಾಜಿಸಿದ್ದರೂ ವಾಸ್ತವಲ್ಲಿ ದೇಶದ ಬಡವರ ಆದಾಯವು ವಾರ್ಷಿಕ ಸುಮಾರು ₹ 30 ಇತ್ತು. ಆದ್ದರಿಂದ ಮುಂದಿನ ಹತ್ತು ವರ್ಷಗಳಲ್ಲಿ ಹಂತಹಂತವಾಗಿ ಈ ಆದಾಯವನ್ನು ಹೆಚ್ಚಿಸುತ್ತಾ ಹೋಗಿ ಎಲ್ಲರಿಗೂ ಕನಿಷ್ಠ ಘನತೆಯ ಜೀವನವನ್ನು ಖಾತರಿಗೊಳಿಸಬೇಕು ಎಂದು ಸಮಿತಿ ಹೇಳಿತ್ತು.
‘ದೇಶದ ಪ್ರಜೆಗಳಿಗೆ ಘನತೆಯ ಜೀವನವನ್ನು ಖಾತರಿಗೊಳಿಸಬೇಕಾದರೆ ದೇಶದ ಒಟ್ಟಾರೆ ಸಂಪತ್ತನ್ನು ಶೇ 500ರಿಂದ ಶೇ 600ರಷ್ಟು ಹೆಚ್ಚಿಸಬೇಕಾಗಿತ್ತು. ಅದು ಅಸಾಧ್ಯ ಸಾಹಸವಾಗಿತ್ತು. ಆದ್ದರಿಂದ ಮುಂದಿನ ಹತ್ತು ವರ್ಷಗಳಲ್ಲಿ ಸಂಪತ್ತನ್ನು ಶೇ 200ರಿಂದ ಶೇ 300ರಷ್ಟು ಹೆಚ್ಚಿಸುವ ಗುರಿಯನ್ನು ನಾವು ಹಾಕಿಕೊಂಡೆವು’ ಎಂದು ನೆಹರೂ ‘ಡಿಸ್ಕವರಿ ಆಫ್ ಇಂಡಿಯಾ’ ಕೃತಿಯಲ್ಲಿ ಬರೆದಿದ್ದಾರೆ. ಕ್ವಿಟ್ ಇಂಡಿಯಾ ಚಳವಳಿಯ ಹಿನ್ನೆಲೆಯಲ್ಲಿ ನಾಯಕರೆಲ್ಲರೂ ಬಂಧನಕ್ಕೊಳಗಾದ್ದರಿಂದ ತನ್ನ ಕೆಲಸವನ್ನು ಪೂರ್ಣಗೊಳಿಸಲು ಈ ಸಮಿತಿಗೆ ಸಾಧ್ಯಗಿರಲಿಲ್ಲ. ಆದರೆ ಸಮಿತಿಯು ಸಿದ್ಧಪಡಿಸಿದ್ದ ಭಾಗಶಃ ವರದಿಯನ್ನು 1947ರಲ್ಲಿ ಪ್ರಕಟಿಸಲಾಯಿತು.
ಸಮಾಜವಾದದ ಬೆಂಬಲಿಗರು ಹಾಗೂ ದೇಶದ ದೊಡ್ಡ ವ್ಯಾಪಾರಿಗಳ ನಿಲುವು ಸಮಿತಿಯ ನಿಲುವಿಗೆ ಭಿನ್ನವಾಗಿದ್ದರಿಂದ ಈ ಸಮಿತಿಯ ಕೆಲಸ ಅಷ್ಟೊಂದು ಸುಲಭವಾಗಿರಲಿಲ್ಲ. ಎಂ. ವಿಶ್ವೇಶ್ವರಯ್ಯ, ಪುರುಷೋತ್ತಮದಾಸ್ ಠಾಕುರ್ದಾಸ್ ಮತ್ತು ಡಾ. ಮೇಘನಾದ್ ಶಾ ಅವರು ಈ ಸಮಿತಿಯ ಇತರ ಸದಸ್ಯರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.