ADVERTISEMENT

ಮಹಾರಾಷ್ಟ್ರ: 7ನೇ ದಿನಕ್ಕೆ ಕಾಲಿಟ್ಟ ಒಬಿಸಿ ಮೀಸಲಾತಿ ಹೋರಾಟಗಾರರ ನಿರಶನ

ಪಿಟಿಐ
Published 19 ಜೂನ್ 2024, 14:11 IST
Last Updated 19 ಜೂನ್ 2024, 14:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಲನಾ: ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕು ಎಂಬ ಒತ್ತಾಯದ ನಡುವೆಯೇ, ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಗೆ ಯಾವುದೇ ತೊಂದರೆಯಾಗಬಾರದು ಎಂದು ಒತ್ತಾಯಿಸಿ ಇಬ್ಬರು ಹೋರಾಟಗಾರರು ಕೈಗೊಂಡಿರುವ ನಿರಶನವು ಬುಧವಾರ ಏಳನೇ ದಿನಕ್ಕೆ ಕಾಲಿಟ್ಟಿದೆ. ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ಒಬಿಸಿ ಮೀಸಲಾತಿ ಹೋರಾಟಗಾರರಾದ ಲಕ್ಷ್ಮಣ್ ಹಾಕೆ ಮತ್ತು ನವನಾಥ ವಾಘಮಾರೆ ಅವರು ಜೂನ್ 13ರಿಂದ ಜಲನಾ ಜಿಲ್ಲೆಯ ವಾದಿಗೋದ್ರಿ ಗ್ರಾಮದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದು, ಸಮುದಾಯದ ಮುಖಂಡರ ಕೋರಿಕೆ ಮೇರೆಗೆ ಸ್ವಲ್ಪ ನೀರು ಕುಡಿದರು. ಆದರೆ, ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಉಪವಾಸದಿಂದಾಗಿ ಈ ಇಬ್ಬರ ರಕ್ತದೊತ್ತಡ ಹೆಚ್ಚಾಗಿದ್ದು, ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗಿದೆ. ಈ ಇಬ್ಬರ ಆರೋಗ್ಯ ಸುಧಾರಣೆಗಾಗಿ ಆಸ್ಪತ್ರೆಗೆ ದಾಖಲಿಸಬೇಕಿದೆ ಎಂದು ಸರ್ಕಾರಿ ವೈದ್ಯಾಧಿಕಾರಿ ಅನಿಲ್ ವಾಘಮಾರೆ ತಿಳಿಸಿದ್ದಾರೆ. 

ADVERTISEMENT

ಕುಣಬಿ ಸಮುದಾಯವನ್ನು ಮರಾಠ ಸಮುದಾಯದ ಸದಸ್ಯರ ರಕ್ತ ಸಂಬಂಧಿ ಎಂಬುದಾಗಿ ಗುರುತಿಸುವ ಮಹಾರಾಷ್ಟ್ರ ಸರ್ಕಾರದ ಅಧಿಸೂಚನೆಯ ಕರಡನ್ನು ರದ್ದುಗೊಳಿಸಬೇಕು ಎಂದು ಒಬಿಸಿ ಕಾರ್ಯಕರ್ತರ ಒತ್ತಾಯವಾಗಿದೆ.

ನಮ್ಮ ಹೋರಾಟವನ್ನು ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಅವರು ಸರ್ಕಾರಿ ಪ್ರಾಯೋಜಿತ ಎಂದು ಕರೆದಿದ್ದಾರೆ. ನಮ್ಮ ಹೋರಾಟ ಸರ್ಕಾರಿ ಪ್ರಾಯೋಜಿತವೇ ಆಗಿದ್ದಲ್ಲಿ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಚರ್ಚಿಸುತ್ತಿದ್ದರು
ಲಕ್ಷ್ಮಣ್ ಹಾಕೆ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.