ಛತ್ರಪತಿ ಸಂಭಾಜಿನಗರ: ಇತರೆ ಹಿಂದುಳಿದ ವರ್ಗದವರು (ಒಬಿಸಿ) ತಮ್ಮ ಕೋಟಾ ಉಳಿಸಿಕೊಳ್ಳಲು ನಡೆಸುತ್ತಿರುವ ಹೋರಾಟವು ‘ಸೇಡಿನಿಂದ ಕೂಡಿದ್ದು’ ಎಂದು ಮರಾಠ ಹೋರಾಟಗಾರ ಮನೋಜ್ ಜರಾಂಗೆ ಟೀಕಿಸಿದ್ದು, ಮರಾಠರು ಒಬಿಸಿ ಅಡಿಯಲ್ಲೇ ಮೀಸಲಾತಿ ಬಯಸುತ್ತಾರೆ ಎಂದು ಪ್ರತಿಪಾದಿಸಿದರು.
ಮಂಗಳವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಒಬಿಸಿಯ ಕೆಲವು ಹೋರಾಟಗಾರರು ನಡೆಸುತ್ತಿರುವ ಪ್ರತಿಭಟನೆಯು ಮರಾಠ ಸಮುದಾಯದವರು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಮೀಸಲಾತಿ ಬೇಡಿಕೆಗಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಲು ನೆರವಾಗಲಿದೆ’ ಎಂದು ಹೇಳಿದರು.
ಮರಾಠಾ ಮೀಸಲಾತಿ ಬೇಡಿಕೆಯು ಒಬಿಸಿ ಕೋಟಾದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರ ಭರವಸೆ ನೀಡುವಂತೆ ಆಗ್ರಹಿಸಿ ಹೋರಾಟಗಾರರಾದ ಲಕ್ಷ್ಮಣ್ ಹಾಕೆ ಮತ್ತು ನವನಾಥ್ ವಾಘ್ಮರೆ ಅವರು ಜಲ್ನಾ ಜಿಲ್ಲೆಯ ವಡೀಗೋದ್ರಿ ಗ್ರಾಮದಲ್ಲಿ ಜೂನ್ 13ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠರಿಗೆ ಪ್ರತ್ಯೇಕ ವರ್ಗದಡಿ ಶೇಕಡಾ 10ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಮಹಾರಾಷ್ಟ್ರ ವಿಧಾನಸಭೆಯು ಈ ವರ್ಷದ ಫೆಬ್ರುವರಿಯಲ್ಲಿ ಅಂಗೀಕರಿಸಿತ್ತು.
ಕುಣಬಿ ಮರಾಠ ರಕ್ತ ಸಂಬಂಧಿಗಳ ಕುರಿತು ಸರ್ಕಾರ ತನ್ನ ಕರಡು ಅಧಿಸೂಚನೆಯನ್ನು ಕಾನೂನಾಗಿ ಪರಿವರ್ತಿಸಬೇಕು ಮತ್ತು ಮಹಾರಾಷ್ಟ್ರದ ಮರಾಠರೆಲ್ಲರಿಗೂ ಕುಣಬಿ ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಜರಾಂಗೆ ಒತ್ತಾಯಿಸುತ್ತಾ ಬಂದಿದ್ದಾರೆ.
ಮರಾಠಾ ಮೀಸಲಾತಿಗೆ ಆಗ್ರಹಿಸಿ ತಾವು ಕೈಗೊಂಡಿದ್ದ ಅನಿರ್ದಿಷ್ಟಾವಧಿ ಉಪವಾಸವನ್ನು ಜರಾಂಗೆ, ಜೂನ್ 13 ರಂದು ಅಂತ್ಯಗೊಳಿಸಿದ್ದರು. ಸಮುದಾಯದ ಬೇಡಿಕೆಗಳನ್ನು ಈಡೇರಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಒಂದು ತಿಂಗಳ ಗಡುವು ವಿಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.