ನವದೆಹಲಿ : ತಮ್ಮದೇ ಪ್ರತ್ಯೇಕ ಇತರೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ಸಿದ್ಧಪಡಿಸುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಮರುಸ್ಥಾಪಿಸುವ, ಸಂವಿಧಾನ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರವು ಸೋಮವಾರ ಲೋಕಸಭೆಯಲ್ಲಿ ಮಂಡಿಸಿದೆ.
ರಾಜ್ಯ ಸರ್ಕಾರಗಳಿಗೆ ಈ ಹಿಂದೆ ಇದ್ದ ಈ ಅಧಿಕಾರವನ್ನು ಮರುಸ್ಥಾಪಿಸುವ ಸಂವಿಧಾನದ 127ನೇ ತಿದ್ದುಪಡಿ ಮಸೂದೆಯನ್ನು, ಸಮಾಜ ಕಲ್ಯಾಣ ಮತ್ತು ಸಬಲೀಕರಣ ಸಚಿವ ಡಾ.ವಿರೇಂದ್ರಕುಮಾರ್ ಮಂಡಿಸಿದರು.
ಇತರೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ಸಿದ್ದಪಡಿಸುವ ಅಧಿಕಾರವು ಈ ಮೊದಲು ರಾಜ್ಯ ಸರ್ಕಾರಗಳಿಗೆ ಇತ್ತು. ಸಂವಿಧಾನಕ್ಕೆ 102ನೇ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರಗಳ ಆ ಅಧಿಕಾರವನ್ನು, ಕೇಂದ್ರ ಸರ್ಕಾರವು 2018ರಲ್ಲಿ ತೆಗೆದು ಹಾಕಿತ್ತು.ಕೇಂದ್ರ ಸರ್ಕಾರದ ಆ ನಿರ್ಧಾರದ ವಿರುದ್ಧ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಸಂಸತ್ತಿನ ಒಳಗೂ ಮತ್ತು ಹೊರಗೂ ಪ್ರತಿಭಟನೆಗಳು ನಡೆದಿದ್ದವು.
2021ರಲ್ಲಿ ಮಹಾರಾಷ್ಟ್ರದ ಮೀಸಲಾತಿ ಪಟ್ಟಿಯ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಸಂವಿಧಾನದ 102ನೇ ತಿದ್ದುಪಡಿಯ ಮಾನ್ಯತೆಯನ್ನು ಎತ್ತಿ ಹಿಡಿದಿತ್ತು.
ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವ ಉದ್ದೇಶದಿಂದ ಸಮುದಾಯಗಳನ್ನು ಇತರ ಹಿಂದುಳಿದ ವರ್ಗಗಳು (ಒಬಿಸಿ) ಎಂದು ಘೋಷಿ ಸುವ ಅಧಿಕಾರ ರಾಜ್ಯಗಳಿಗಿಲ್ಲ ಎಂದು ಮೇ 5ರಂದು ನೀಡಿದ ತೀರ್ಪಿನಲ್ಲಿ ಹೇಳಿತ್ತು.
ಈ ತೀರ್ಪು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನೂ ವಜಾಗೊಳಿಸಿತ್ತು.
ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ, ಸಂವಿಧಾನಕ್ಕೆ ಮತ್ತೆ ತಿದ್ದುಪಡಿ ತರಲು ಸರ್ಕಾರವು ಮುಂದಾಗಿದೆ. ಆ ಭಾಗವಾಗಿ 127ನೇ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದೆ.
ಒಕ್ಕೂಟ ವ್ಯವಸ್ಥೆಕಾಯ್ದುಕೊಳ್ಳಲು ಅಗತ್ಯ:'ದೇಶದ ಒಕ್ಕೂಟ ವ್ಯವಸ್ಥೆಯನ್ನು ಕಾಯ್ದುಕೊಳ್ಳುವ ಸಲುವಾಗಿ, ತಮ್ಮದೇ ಆದ ಪ್ರತ್ಯೇಕ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಯನ್ನು ಸಿದ್ಧಪಡಿಸುವ ಅಧಿಕಾರವನ್ನುರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಬೇಕಿದೆ. ಇದಕ್ಕಾಗಿ ಸಂವಿಧಾನದ 342ನೇ ಎ, 338 ಬಿ ಮತ್ತು 366ನೇ ವಿಧಿಗಳಿಗೆ ತಿದ್ದುಪಡಿ ತರಬೇಕಿದೆ' ಎಂದು ಸಚಿವ ವಿರೇಂದ್ರ ಕುಮಾರ್ ಅವರು ಮಸೂದೆ ಮಂಡನೆ ವೇಳೆ ಹೇಳಿದ್ದಾರೆ.
ಮಸೂದೆಯ ಮೇಲೆ ಲೋಕ ಸಭೆಯಲ್ಲಿ ಇನ್ನಷ್ಟೇ ಚರ್ಚೆ ನಡೆಯ ಬೇಕಿದೆ. ಲೋಕಸಭೆಯಲ್ಲಿ ಮಂಗಳ ವಾರ ಈ ಮಸೂದೆಗೆ ಅಂಗೀಕಾರ ದೊರೆಯುವ ನಿರೀಕ್ಷೆ ಇದೆ.
ರಾಜ್ಯಸಭೆ ಯಲ್ಲಿ ಈ ಮಸೂದೆಯನ್ನು ಸರ್ಕಾರ ಇನ್ನೂ ಮಂಡಿಸಿಲ್ಲ. ಎರಡೂ ಸದನ ಗಳಲ್ಲಿ ಮಸೂದೆಗೆ ಅಂಗೀಕಾರ ದೊರೆತ ನಂತರ, ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗುತ್ತದೆ.
ಅಧಿಕಾರ ಕಸಿದುಕೊಂಡಿದ್ದ 102ನೇ ತಿದ್ದುಪಡಿ:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೊದಲ ಅವಧಿಯ ಎನ್‌ಡಿಎ ಸರ್ಕಾರವು 2018ರಲ್ಲಿ ಸಂವಿಧಾನಕ್ಕೆ 102ನೇ ತಿದ್ದುಪಡಿಯನ್ನು ತಂದಿತ್ತು. ಆ ತಿದ್ದುಪಡಿಯ ಮೂಲಕ ಸಂವಿಧಾನಕ್ಕೆ 338ನೇ ಬಿ, 342ನೇ ಎ ಮತ್ತು 366ನೇ ವಿಧಿಯನ್ನು ಸೇರಿಸಲಾಗಿತ್ತು.
338ಬಿ ವಿಧಿಯು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ರಚನೆ, ಅಧಿಕಾರ ಮತ್ತು ಕರ್ತವ್ಯಗಳನ್ನು ವ್ಯಾಖ್ಯಾನಿಸುತ್ತದೆ. ದೇಶದ ಯಾವುದೇ ಜಾತಿಯನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ವರ್ಗ ಎಂದು ಅಧಿಸೂಚನೆ ಹೊರಡಿಸುವ ಅಧಿಕಾರವನ್ನು 342 ಎ ವಿಧಿಯು ರಾಷ್ಟ್ರಪತಿಗೆ ನೀಡುತ್ತದೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗ ಏನು ಎಂಬುದನ್ನು 366ನೇ (26ಸಿ) ವಿಧಿ ವ್ಯಾಖ್ಯಾನಿಸುತ್ತದೆ.
102ನೇ ತಿದ್ದುಪಡಿಯ ಪ್ರಕಾರ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು ಮಾತ್ರವೇಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಯನ್ನು ಸಿದ್ಧಪಡಿಸುವ ಅಧಿಕಾರವನ್ನು ಹೊಂದಿದೆ. ಆ ಪಟ್ಟಿಯ ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗುತ್ತದೆ. ಈ ತಿದ್ದುಪಡಿಯ ಮೂಲಕ, ತಮ್ಮದೇ ಪ್ರತ್ಯೇಕ ಪಟ್ಟಿಯನ್ನು ಸಿದ್ಧಪಡಿಸುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಕೇಂದ್ರವು ಕಸಿದುಕೊಂಡಿತ್ತು.
ಈಗ ಲೋಕಸಭೆಯಲ್ಲಿ ಮಂಡಿಸಲಾಗಿರುವ ಸಂವಿಧಾನದ 127ನೇ ತಿದ್ದುಪಡಿ ಮಸೂದೆಯು, ಈ ಎಲ್ಲಾ ಬದಲಾವಣೆಗಳನ್ನು ರದ್ದುಪಡಿಸುತ್ತದೆ. ರಾಜ್ಯ ಸರ್ಕಾರಗಳ ಅಧಿಕಾರವನ್ನು ಮರುಸ್ಥಾಪಿಸುತ್ತದೆ.
ಪ್ರತಿಭಟನೆ ಕೈಬಿಡಲು ನಿರ್ಧಾರ:
ರಾಜ್ಯ ಸರ್ಕಾರಗಳು ಒಬಿಸಿ ಪಟ್ಟಿಯನ್ನು ಸಿದ್ಧಪಡಿಸುವ ಅಧಿಕಾರವನ್ನು ಮರುಸ್ಥಾಪಿಸುವ ಸಂವಿಧಾನದ 127ನೇ ತಿದ್ದುಪಡಿ ಮಸೂದೆಯ ಮಂಡನೆ, ಚರ್ಚೆ ಮತ್ತು ಅಂಗೀಕಾರದ ವೇಳೆ ಸಂಸತ್ತಿನ ಉಭಯ ಸದನಗಳಲ್ಲೂ ಪ್ರತಿಭಟನೆ ಕೈಬಿಡಲು ವಿರೋಧ ಪಕ್ಷಗಳು ನಿರ್ಧರಿಸಿವೆ.
ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದ ದಿನದಿಂದಲೂ ಪೆಗಾಸಸ್ ಗೂಢಚರ್ಯೆ ಮತ್ತು ರೈತರ ಪ್ರತಿಭಟನೆ ಕುರಿತು ಚರ್ಚೆ ನಡೆಸಲು ವಿರೋಧ ಪಕ್ಷಗಳು ಉಭಯ ಸದನಗಳಲ್ಲೂ ಒತ್ತಾಯಿಸುತ್ತಿವೆ. ಚರ್ಚೆಗೆ ಸರ್ಕಾರ ಒಪ್ಪದ ಕಾರಣ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿದಿನವೂ ಕಲಾಪವನ್ನು ಮುಂದೂಡಲಾಗುತ್ತಿದೆ. ಆದರೆ ಸಂವಿಧಾನ ತಿದ್ದುಪಡಿ ಮಸೂದೆಗೆ ಪ್ರತಿಭಟನೆ ಮೂಲಕ ಅಡ್ಡಿಪಡಿಸದೇ ಇರಲು ಮತ್ತು ಮಸೂದೆಗೆ ಒಪ್ಪಿಗೆ ನೀಡಲು ವಿರೋಧ ಪಕ್ಷಗಳು ನಿರ್ಧರಿಸಿವೆ.ಕಲಾಪಕ್ಕೆ ಅಡ್ಡಿಪಡಿಸಿದಲ್ಲಿ, ಒಬಿಸಿ ವರ್ಗ ಗುರುತಿಸುವ ಅಧಿಕಾರವನ್ನು ರಾಜ್ಯಗಳಿಗೆ ಕೊಡಲು ಪ್ರತಿಪಕ್ಷಗಳು ಅಡ್ಡಿಯಾದವು ಎಂದು ಬಿಜೆಪಿ ಬಿಂಬಿಸಬಹುದು. ಇದು ಮುಂಬರುವ ಉತ್ತರ ಪ್ರದೇಶ ಹಾಗೂ ಪಂಜಾಬ್ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರತಿಕೂಲ ಪರಿಣಾಮ ಬೀರಬಹುದು ಎಂಬುದು ಕೂಡ ವಿರೋಧ ಪಕ್ಷಗಳ ಕಳವಳವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.