ADVERTISEMENT

ಆಧಾರ್ ದೃಢೀಕರಿಸಲು ವ್ಯಕ್ತಿ ಒಪ್ಪಿಗೆ ಅಗತ್ಯ: ಯುಐಡಿಎಐ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 14:11 IST
Last Updated 23 ಜನವರಿ 2023, 14:11 IST
.
.   

ನವದೆಹಲಿ: ‘ದೃಢೀಕರಣಕ್ಕಾಗಿ ಆಧಾರ್ ಪಡೆದುಕೊಳ್ಳುವ ಸಂಸ್ಥೆಗಳು ದೃಢೀಕರಿಸುವುದಕ್ಕೂ ಮೊದಲು ಸಂಬಂಧಪಟ್ಟ ವ್ಯಕ್ತಿಗೆ ಮಾಹಿತಿ ನೀಡಬೇಕು ಮತ್ತು ಅವರ ಒಪ್ಪಿಗೆಯನ್ನು ಲಿಖಿತ ಅಥವಾ ವಿದ್ಯುನ್ಮಾನ ರೂಪದಲ್ಲಿ ಪಡೆದುಕೊಳ್ಳಬೇಕು’ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) ತನ್ನ ಹೊಸ ಮಾರ್ಗಸೂಚಿಯಲ್ಲಿ ಸೋಮವಾರ ಹೇಳಿದೆ.

‘ಈ ರೀತಿಯ ಒಪ್ಪಿಗೆ ಪಡೆಯುವಿಕೆಯ ಪ್ರಕ್ರಿಯೆಯಲ್ಲಿ ಯಾವ ರೀತಿಯ ದತ್ತಾಂಶ ಸಂಗ್ರಹಿಸಲಾಗುತ್ತಿದೆ ಮತ್ತು ಆನ್‌ಲೈನ್‌ ಆಧಾರ್ ದೃಢೀಕರಣದ ಹಿಂದಿನ ಉದ್ದೇಶವೇನೆಂಬುದನ್ನು ಸಂಬಂಧಪಟ್ಟ ವ್ಯಕ್ತಿಗಳಿಗೆ ಮನದಟ್ಟಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವಂತೆ ದೃಢೀಕರಿಸುವ ಸಂಸ್ಥೆಗಳಿಗೆ ಯುಐಡಿಎಐ ಸೂಚಿಸಿದೆ’ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿದೆ.

‘ದೃಢೀಕರಣಕ್ಕಾಗಿ ತೆಗೆದುಕೊಳ್ಳಲಾಗುವ ಒಪ್ಪಿಗೆ ಸೇರಿ ಅದಕ್ಕೆ ಸಂಬಂಧಿಸಿದ ವಹಿವಾಟುಗಳು ಆಧಾರ್ ನಿಯಮಾವಳಿಯಲ್ಲಿ ಸೂಚಿಸಲಾದ ಅವಧಿಗೆ ಮಾತ್ರ ಇರಲಿದೆ. ಈ ಅವಧಿಯು ಮುಗಿದ ನಂತರ ಅಂತಹ ದಾಖಲೆಗಳ ತೆರವು ಪ್ರಕ್ರಿಯೆಯು ಆಧಾರ್‌ ಕಾಯ್ದೆ ಮತ್ತು ನಿಬಂಧನೆಗಳ ಪ್ರಕಾರವೇ ನಡೆಯಲಿದೆ’ ಎಂದೂ ಪ್ರಾಧಿಕಾರ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.