ನವದೆಹಲಿ: ಲೇಖಕ ಆತಿಶ್ ತಸೀರ್ ಅವರಿಗೆ ನೀಡಲಾಗಿದ್ದ ಸಾಗರೋತ್ತರ ಭಾರತೀಯ ಕಾರ್ಡ್ (ಒಸಿಐ) ಅನ್ನು ಭಾರತ ಸರ್ಕಾರ ಶುಕ್ರವಾರ ಹಿಂದಕ್ಕೆ ಪಡೆದಿದೆ. ಈ ಬಗ್ಗೆ ನೀಡಲಾದ ನೋಟಿಸ್‌ಗೆ ಆತಿಶ್ ಅವರು ಪ್ರತಿಕ್ರಿಯೆ ನೀಡಿಲ್ಲ ಎಂದು ಗೃಹ ಸಚಿವಾಲಯ ಹೇಳಿದೆ. ಆದರೆ, ಅದನ್ನು ಆತಿಶ್ ನಿರಾಕರಿಸಿದ್ದಾರೆ.
ಭಾರತದ ಪ್ರಸಿದ್ಧ ಪತ್ರಕರ್ತೆ ತವ್ಲೀನ್ ಸಿಂಗ್ ಅವರು ಆತಿಶ್ ತಾಯಿ.
ಲೋಕಸಭಾ ಚುನಾವಣೆಗೆ ಮೊದಲು ‘ಟೈಮ್’ ನಿಯತಕಾಲಿಕದಲ್ಲಿ ಆತಿಶ್ ಅವರು ನರೇಂದ್ರ ಮೋದಿ ಅವರು ‘ಭಾರತದ ಮುಖ್ಯ ವಿಭಜಕ’ (ಡಿವೈಡರ್ ಇನ್ ಚೀಫ್) ಎಂಬ ತಲೆಬರಹದಲ್ಲಿ ಲೇಖನ ಬರೆದಿದ್ದರು. ಈ ಕಾರಣಕ್ಕಾಗಿಯೇ ಆತಿಶ್ ಅವರ ಒಸಿಐ ಅನ್ನು ರದ್ದುಪಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಆತಿಶ್ ಅವರು ಪಾಕಿಸ್ತಾನಿ ಎಂದು ಆಗ ಮೋದಿ ಅವರು ಪ್ರತಿಕ್ರಿಯೆ ನೀಡಿದ್ದರು. ‘ತಾವು ಪಾಕಿಸ್ತಾನದ ರಾಜಕೀಯ ಕುಟುಂಬವೊಂದರಿಂದ ಬಂದವರು ಎಂದು ಆತಿಶ್ ಹೇಳಿಕೊಂಡಿದ್ದಾರೆ. ಅವರ ವಿಶ್ವಾಸಾರ್ಹತೆಗೆ ಈ ಹೇಳಿಕಯೇ ಸಾಕು’ ಎಂದು ಮೋದಿ ಹೇಳಿದ್ದರು.
ಒಸಿಐಗೆ ಬೇಕಾದ ಮೂಲಭೂತ ಅಗತ್ಯಗಳನ್ನು ಅವರು ಪೂರೈಸಿಲ್ಲ ಮತ್ತು ಕೆಲವು ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜ್ಯಪಾಲರಾಗಿದ್ದ ಸಲ್ಮಾನ್ ತಸೀರ್ ಅವರು ತಮ್ಮ ತಂದೆ ಎಂಬ ಮಾಹಿತಿಯನ್ನು ಆತಿಶ್ ಉಲ್ಲೇಖಿಸಿಲ್ಲ ಎಂದು ಗೃಹ ಸಚಿವಾಲಯ ಹೇಳಿದೆ.
ಗೃಹ ಸಚಿವಾಲಯದ ನಿಲುವು ಪ್ರಕಟವಾಗುತ್ತಿದ್ದಂತೆಯೇ ಆತಿಶ್ ಅವರು ‘ಟೈಮ್’ನಲ್ಲಿ ಲೇಖನವೊಂದನ್ನು ಬರೆದಿದ್ದಾರೆ. ತಾವು ಪಾಕಿಸ್ತಾನಿ ಅಲ್ಲ ಮತ್ತು ತಮ್ಮ ತಂದೆಯ ಜತೆಗಿನ ಸಂಬಂಧ ಸಮಸ್ಯಾತ್ಮಕವಾಗಿತ್ತು ಎಂದು ಈ ಲೇಖನದಲ್ಲಿ ಹೇಳಿದ್ದಾರೆ.
‘21 ವರ್ಷ ವಯಸ್ಸಾಗುವವರೆಗೆ ನನಗೆ ತಂದೆಯ ಜತೆಗೆ ಯಾವುದೇ ಸಂಪರ್ಕ ಇರಲಿಲ್ಲ. ನಾನು ಹುಟ್ಟಿದ್ದು ಬ್ರಿಟನ್‌ನಲ್ಲಿ ಮತ್ತು ಅಲ್ಲಿನ ಪೌರತ್ವವನ್ನು ಹೊಂದಿದ್ದೇನೆ. ಎರಡನೇ ವಯಸ್ಸಿನಿಂದ ನಾನು ಬೆಳೆದದ್ದು ಭಾರತದದಲ್ಲಿ. ನನ್ನ ತಾಯಿ ಭಾರತೀಯ ಪ್ರಜೆ ಮತ್ತು ಪ್ರಸಿದ್ಧ ಪತ್ರಕರ್ತೆ. ಅವರೊಬ್ಬರೇ ನನ್ನನ್ನು ದೆಹಲಿಯಲ್ಲಿ ಬೆಳೆಸಿದರು’ ಎಂದು ಆತಿಶ್ ಬರೆದಿದ್ದಾರೆ.
ತಮಗೆ ಆಧಾರ್ ಸಂಖ್ಯೆ ಇದೆ, ಭಾರತದ ಬ್ಯಾಂಕುಗಳಲ್ಲಿ ಖಾತೆಗಳಿವೆ ಮತ್ತು ಅಲ್ಲಿ ತೆರಿಗೆಯನ್ನೂ ಪಾವತಿಸಿದ್ದೇನೆ ಎಂದೂ ಅವರು ಹೇಳಿದ್ದಾರೆ. ನೋಟಿಸ್‌ಗೆ ತಾವು ನೀಡಿದ್ದ ಪ್ರತಿಕ್ರಿಯೆಗೆಗೃಹ ಸಚಿವಾಲಯವು ಕೊಟ್ಟ ಸ್ವೀಕೃತಿ ಪತ್ರವನ್ನು ಅವರು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.
ಸರ್ಕಾರದ ನಿಲುವಿಗೆ ಟೀಕೆ
ಒಸಿಐ ರದ್ದತಿಗೆ ಟೀಕೆ ವ್ಯಕ್ತವಾಗಿದೆ. ಸರ್ಕಾರದ ಕ್ರಮವನ್ನು ಟ್ವಿಟರ್ ಮತ್ತು ಇತರ ವೇದಿಕೆಗಳಲ್ಲಿ ಖಂಡಿಸಲಾಗಿದೆ
ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ)
ಟೀಕೆಗಳ ಬಗ್ಗೆ ಬಿಜೆಪಿಗೆ ಅಸಹಿಷ್ಣುತೆ ಇದೆ ಮತ್ತು ಮಾಧ್ಯಮ ಸ್ವಾತಂತ್ರ್ಯವನ್ನು ಆ ಪಕ್ಷ ಒಪ್ಪಿಕೊಳ್ಳುವುದಿಲ್ಲ ಎಂಬುದನ್ನು ವಿಮರ್ಶಾತ್ಮಕವಾದ ಲೇಖನವನ್ನು ಪ‍್ರಕಟಿಸಿದ ಬಳಿಕ ಪತ್ರಕರ್ತನನ್ನು ಗುರಿ ಮಾಡಿದ್ದು ತೋರಿಸುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಹೊಂದಿರುವ ವರ್ಚಸ್ಸಿಗೆ ಇದು ಧಕ್ಕೆ ಉಂಟು ಮಾಡುತ್ತದೆ. ಆತಿಶ್ ಬಗ್ಗೆ ನೀಡಿದ ನಿರ್ದೇಶನವನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು ಮತ್ತು ಅವರ ಸಾಗರೋತ್ತರ ಪೌರತ್ವದ ಬದಲಾವಣೆಯ ಪ್ರಯತ್ನವನ್ನು ಕೈಬಿಡಬೇಕು.
-ಸ್ಟೀವನ್ ಬಟ್ಲರ್, ಸಿಪಿಜೆ ಏಷ್ಯಾ ಕಾರ್ಯಕ್ರಮ ಸಂಯೋಜಕ
ಟೀಕಿಸಿದವರ ದಮನ
ತಮ್ಮ ಅಂಕಣಗಳಲ್ಲಿ ತವ್ಲೀನ್ ಅವರು ನನ್ನನ್ನು ಆಗಾಗ ಟೀಕಿಸಿದ್ದಾರೆ. ಆದರೆ, ಗೃಹ ಸಚಿವಾಲಯವು ಆತಿಶ್ ಅವರ ಒಸಿಐ ರದ್ದು ಮಾಡಿದ್ದನ್ನು ನಾನು ಖಂಡಿಸುತ್ತೇನೆ. ಏನೇ ಆದರೂ, ಇದು ನಿರೀಕ್ಷಿತ. ವಿಮರ್ಶಾತ್ಮಕ ಧ್ವನಿಗಳ ಮೇಲೆ ಬೇಹುಗಾರಿಕೆ ನಡೆಸಲಾಗುತ್ತದೆ, ಕಿರುಕುಳ ನೀಡಲಾಗುತ್ತದೆ ಮತ್ತು ದಮನ ಮಾಡಲಾಗುತ್ತದೆ. ನಿರಂಕುಶಾಧಿಕಾರಕ್ಕೆ ಇನ್ನೊಂದು ಹೆಸರೇ ಗೃಹ ಸಚಿವ ಅಮಿತ್ ಶಾ.
-ಜೈರಾಂ ರಮೇಶ್, ಕಾಂಗ್ರೆಸ್ ಮುಖಂಡ
ವಕ್ತಾರನಿಂದ ಸುಳ್ಳು ಹೇಳಿಕೆ
ಸರ್ಕಾರದ ಅಧಿಕೃತ ವಕ್ತಾರನೇ ಸುಳ್ಳು ಹೇಳಿಕೆ ನೀಡಿದ್ದು ನೋಡಿ ನೋವಾಯಿತು. ಎಷ್ಟೊಂದು ಸುಲಭವಾಗಿ ಬಯಲು ಮಾಡಬಹುದಾದಂತಹ ಸುಳ್ಳು ಅದು. ನಮ್ಮಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ನಡೆಯುತ್ತಿದೆ ಎಂಬುದು ಇನ್ನೂ ನೋವಿನ ವಿಚಾರ. ಪತ್ರಕರ್ತನೊಬ್ಬನ ಮುಂದೆ ಹೆದರಿ ನಿಲ್ಲುವಷ್ಟು ನಮ್ಮ ಸರ್ಕಾರ ದುರ್ಬಲವಾಗಿದೆಯೇ?
-ಶಶಿ ತರೂರ್, ಕಾಂಗ್ರೆಸ್ ಮುಖಂಡ
ಟೀಕೆ ಸಹಿಸುವುದಿಲ್ಲ
ಸತ್ಯವನ್ನು ಮುಚ್ಚಿಡಲಾಗಿದೆಯೇ? ತಮ್ಮ ಹಿನ್ನೆಲೆಯ ಬಗ್ಗೆ ಆತಿಶ್ ಅವರು ಪುಸ್ತಕವನ್ನೇ ಬರೆದಿದ್ದಾರೆ. ಸರ್ಕಾರವು ಟೀಕೆಯನ್ನು ಸಹಿಸಿಕೊಳ್ಳುವುದಿಲ್ಲ ಎಂಬ ಕಾರಣಕ್ಕಾಗಿ ಉಪಖಂಡದ ಅತ್ಯುತ್ತಮ ಬರಹಗಾರನೊಬ್ಬನ ರಾಷ್ಟ್ರೀಯತೆಯನ್ನು ರದ್ದು ಮಾಡಲಾಗಿದೆ. ಆತಿಶ್ ಮುಸ್ಲಿಂ ಎಂಬುದನ್ನು ತೋರಿಸುವುದಕ್ಕಾಗಿಯೇ ಅವರ ಹೆಸರಿನ ಜತೆಗೆ ‘ತಸೀರ್’ ಎಂದು ಉಲ್ಲೇಖಿಸಲಾಗಿದೆ.
-ಒಮರ್ ವಾರೈಚ್, ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಉಪ ನಿರ್ದೇಶಕ (ದಕ್ಷಿಣ ಏಷ್ಯಾ)
ಕಳವಳಕಾರಿ
ಮೋದಿ ನೇತೃತ್ವದ ಸರ್ಕಾರವು ಆತಿಶ್ ಅವರ ಒಸಿಐ ರದ್ದು ಮಾಡಿರುವುದು ನಿಜಕ್ಕೂ ಕಳವಳ ಮೂಡಿಸಿದೆ. ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾದರೆ, ಮೋದಿ ಟೀಕಾಕಾರರನ್ನು ಇನ್ನೂ ಕಠಿಣವಾಗಿ ಶಿಕ್ಷಿಸುವ ಅಧಿಕಾರ ಸರ್ಕಾರಕ್ಕೆ ದೊರೆಯಲಿದೆ.
-ಕವಿತಾ ಕೃಷ್ಣನ್, ಸಿಪಿಐ (ಎಂಎಲ್) ಪಾಲಿಟ್‌ಬ್ಯೂರೊ ಸದಸ್ಯೆ
**
ಆತಿಶ್‌ನ ತಾಯಿ ಯಾವಾಗಲೂ ಭಾರತೀಯ ಪ್ರಜೆ. ಗೃಹ ಸಚಿವರಿಗೆ ಇಷ್ಟವಾಗದ್ದನ್ನು ಬರೆಯುವವರೆಗೆ ಭಾರತದಲ್ಲಿ ನೆಲೆಸುವ ಆತನ ಹಕ್ಕನ್ನು ಯಾರೂ ಪ್ರಶ್ನಿಸಿರಲಿಲ್ಲ.
-ತವ್ಲೀನ್ ಸಿಂಗ್, ಆತಿಶ್ ತಾಯಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.