ADVERTISEMENT

ಒಸಿಐ ಕಾರ್ಡ್‌ದಾರರ ತಬ್ಲೀಗ್‌, ಮಾಧ್ಯಮ ಚಟುವಟಿಕೆ: ಪೂರ್ವಾನುಮತಿ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 11:38 IST
Last Updated 5 ಮಾರ್ಚ್ 2021, 11:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ (ಪಿಟಿಐ): ಸಾಗರೋತ್ತರ ಭಾರತೀಯ ಕಾರ್ಡ್‌ (ಒಸಿಐ) ಹೊಂದಿರುವವರು ಇನ್ನು ಮುಂದೆ ದೇಶದಲ್ಲಿ ತಬ್ಲೀಗ್‌ನ ಚಟುವಟಿಕೆ ಅಥವಾ ಮಾಧ್ಯಮ ಚಟುವಟಿಕೆ ಕೈಗೊಳ್ಳಲು ಕಡ್ಡಾಯವಾಗಿ ಕೇಂದ್ರದ ಅನುಮತಿ ಪಡೆಯಬೇಕು.

ಆದರೆ, ದೇಶೀ ವಿಮಾನ ಪ್ರಯಾಣ ದರ, ಪ್ರವೇಶ ಶುಲ್ಕ, ಭಾರತದಲ್ಲಿನ ರಾಷ್ಟ್ರೀಯ ಉದ್ಯಾನಗಳು, ಸ್ಮಾರಕಗಳು ಮತ್ತು ಸಂಗ್ರಹಾಲಯಗಳಿಗೆ ಭೇಟಿ ನೀಡುವ ಕುರಿತಂತೆ ಕೇಂದ್ರ ಗೃಹ ಸಚಿವಾಲಯವು ವಿನಾಯಿತಿ ನೀಡಿದೆ.

ಗುರುವಾರ ರಾತ್ರಿ ಹೊರಡಿಸಲಾದ ಅಧಿಸೂಚನೆಯಲ್ಲಿ ಸಚಿವಾಲಯವು, ಒಸಿಐ ಕಾರ್ಡ್‌ದಾರರು ಬಹುಪ್ರವೇಶಾವಕಾಶ ಇರುವ, ದೀರ್ಘಾವಧಿಯ ವೀಸಾ ಪಡೆಯಲು ಅರ್ಹರಿದ್ದಾರೆ ಎಂದು ಹೇಳಲಾಗಿದೆ. ಆದರೆ, ಧಾರ್ಮಿಕ ಚಟುವಟಿಕೆ, ತಬ್ಲೀಗ್ ಅಥವಾ ಮಾಧ್ಯಮ ಚಟುವಟಿಕೆ ಕೈಗೊಳ್ಳುವುದಿದ್ದರೆ ವಿದೇಶಿಗರ ಪ್ರಾದೇಶಿಕ ನೋಂದಣಿ ಅಧಿಕಾರಿಗಳಿಂದ ಅನುಮತಿ ಕಡ್ಡಾಯ ಎಂದು ತಿಳಿಸಿದೆ.

ADVERTISEMENT

ಕಳೆದ ಮಾರ್ಚ್‌ ತಿಂಗಳಲ್ಲಿ ದೇಶದಲ್ಲಿ ಕೊರೊನಾ ಸೋಂಕು ಆರಂಭದ ದಿನಗಳಲ್ಲಿ ದೆಹಲಿಯಲ್ಲಿ ನಡೆದಿದ್ದ ತಬ್ಲೀಗ್ ಸಭೆಯಲ್ಲಿ 2,500ಕ್ಕೂ ಅಧಿಕ ವಿದೇಶಿ ಸದಸ್ಯರು ಭಾಗವಹಿಸಿದ್ದರು ಎಂಬುದು ತೀವ್ರ ಚರ್ಚೆಗೆ ಆಸ್ಪದವಾಗಿತ್ತು. ವೀಸಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಸುಮಾರು 233 ವಿದೇಶಿ ತಬ್ಲೀಗ್ ಸದಸ್ಯರನ್ನು ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.