ಭುವನೇಶ್ವರ: ವಿಧಾನಸಭೆ ಚುನಾವಣೆಯಲ್ಲಿಒಡಿಶಾ ಮತದಾರರು ಬಿಜೆಡಿಯನ್ನು ಆಯ್ಕೆ ಮಾಡಿಕೊಂಡಿದ್ದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೂ ಒಲವು ತೋರಿದ್ದಾರೆ.
2014ರಲ್ಲಿ ಒಡಿಶಾದ 21 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಕೇವಲ ಒಂದು ಸ್ಥಾನದಲ್ಲಿ ಜಯ ಸಾಧಿಸಿತ್ತು. ಉಳಿದ ಸ್ಥಾನಗಳು ಬಿಜೆಡಿ ಪಾಲಾಗಿದ್ದವು. ಆದರೆ,ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 9 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಪ್ರಮುಖ ಪ್ರತಿಸ್ಪರ್ಧಿ ಬಿಜೆಡಿ 12ರಲ್ಲಿ ಗೆಲುವು ಸಾಧಿಸಿದೆ.
ಕೇಂದ್ರ ಸಚಿವ ಜುವಲ್ ಒರಮ್ ಮಾತ್ರ ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಒರಮ್ ಸುಮಾರು 1 ಲಕ್ಷ ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.
ಪುರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷದ ವಕ್ತಾರಸಂಬಿತ್ ಪಾತ್ರಾ ಹಾಗೂ ಬಿಜೆಡಿ ಅಭ್ಯರ್ಥಿ ಮತ್ತು ಹಾಲಿ ಸಂಸದ ಪಿನಾಕಿ ಮಿಶ್ರಾ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು.
ರಾಜಕೀಯವಾಗಿ ಸೂಕ್ಷ್ಮವಾಗಿರುವ ಕೆಂದ್ರಪರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಡಿಯ ರಾಜ್ಯಸಭಾ ಸದಸ್ಯ ಅನುಭವ್ ಮೊಹಾಂತಿ ಅವರು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರು ಆಗಿರುವ ಬೈಜಯಂತ್ ಪಾಂಡಾ ವಿರುದ್ಧ 61,043 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಬಿಜೆಡಿಯಮಹಿಳಾ ಅಭ್ಯರ್ಥಿಗಳಿಗೆ ಮುನ್ನಡೆ
ಶೇಕಡ 33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು ಎನ್ನುವ ನಿರ್ಧಾರ ಕೈಗೊಂಡಿದ್ದ ಬಿಜೆಡಿ, ಏಳು ಮಹಿಳೆಯರನ್ನು ಕಣಕ್ಕಿಳಿಸಿತ್ತು. ಇವರಲ್ಲಿ ಆರು ಮಹಿಳೆಯರು ಬಿಜೆಪಿ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ. ಸ್ವಸಹಾಯ ಸಂಘದ ನಾಯಕಿ ಪ್ರಮೀಳಾ ಬಿಸೊಯಿ ಅವರನ್ನು ಕಣಕ್ಕಿಳಿಸಲುಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ಅವರ ಕೈಗೊಂಡ ನಿರ್ಧಾರ ಬಿಜೆಡಿಗೆ ಅನುಕೂಲವಾಗಿದೆ.
70 ವರ್ಷದ ಬಿಸೊಯಿ ಸುಮಾರು 1.30 ಲಕ್ಷ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.