ಭುವನೇಶ್ವರ, ಒಡಿಶಾ: ಶನಿವಾರ ಒಡಿಶಾದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತಾರೂಡ ಬಿಜೆಡಿಯ ನವೀನ್ ಪಟ್ನಾಯಕ್ ಹಾಗೂ ಅವರ ಸರ್ಕಾರದ ವಿರುದ್ಧ ಹರಿತವಾದ ವಾಗ್ದಾಳಿ ನಡೆಸಿದ್ದಾರೆ.
ಬೋಲಂಗಿರ್, ಕಂದಮಹಲ್ ಹಾಗೂ ಬಾರಗರ್ ಲೋಕಸಭೆ ಮತ್ತು ಅದರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಕಾರ್ಯದಲ್ಲಿ ಅವರು ಭಾಗಿಯಾದರು.
ಈ ವೇಳೆ ಮಾತನಾಡಿದ ಅವರು, 24 ವರ್ಷ ಮುಖ್ಯಮಂತ್ರಿಯಾದರೂ ನವೀನ್ ಬಾಬು (ಸಿಎಂ ನವೀನ್ ಪಟ್ನಾಯಕ್) ಅವರಿಗೆ ಒಡಿಶಾದ ಎಲ್ಲ ಜಿಲ್ಲೆಗಳ ಹೆಸರನ್ನು ಪೇಪರ್‌ಗಳ ಸಹಾಯವಿಲ್ಲದೇ ಹೇಳಲು ಬರುವುದಿಲ್ಲ. ಇವರು ಇನ್ನೇನು ಒಡಿಶಾದ ಜನರ ಹಿತ ಕಾಪಾಡುತ್ತಾರೆ? ಎಂದು ಲೇವಡಿ ಮಾಡಿದ್ದಾರೆ.
ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿಯೂ ಸದ್ದು ಮಾಡುತ್ತಿದೆ.
ಒಡಿಶಾದ ಅಸ್ಮಿತೆ ಉಳಿಸುವ ಕಾಲ ಕೂಡಿ ಬಂದಿದೆ. ಬಿಜೆಡಿ ಆಡಳಿತಕ್ಕೆ ಅಂತ್ಯ ಹಾಡಿ ನಮಗೆ ಕೇವಲ ಐದು ವರ್ಷ ಅವಕಾಶ ಕೊಟ್ಟು ನೋಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ನವೀನ್ ಪಟ್ನಾಯಕ್ ಅವರ ಸೂಪರ್ ಸಿಎಂ ಆಗಿ ವಿ.ಕೆ ಪಾಂಡಿಯನ್ ಮೆರೆಯುತ್ತಿದ್ದಾರೆ. ಸಿಎಂ ಗಾಢ ನಿದ್ರೆಯಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಒಡಿಶಾದ 21 ಲೋಕಸಭಾ ಕ್ಷೇತ್ರಗಳಿಗೆ ಮೇ 13ರಿಂದ ನಾಲ್ಕು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೇ 13ರಂದೇ ವಿಧಾನಸಭೆಯ 147 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಜೂನ್ 4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.