ADVERTISEMENT

ಒಡಿಶಾದ ನೂತನ ಮುಖ್ಯಮಂತ್ರಿ ಆಗಿ ಮೋಹನ್ ಚರಣ್ ಮಾಝಿ ಆಯ್ಕೆ: ನಾಳೆ ಪ್ರಮಾಣವಚನ

ಪಿಟಿಐ
Published 11 ಜೂನ್ 2024, 13:01 IST
Last Updated 11 ಜೂನ್ 2024, 13:01 IST
<div class="paragraphs"><p>ಮೋಹನ್‌ ಚರಣ್ ಮಾಝಿ</p></div>

ಮೋಹನ್‌ ಚರಣ್ ಮಾಝಿ

   

ಚಿತ್ರಕೃಪೆ: ಮೋಹನ್ ಮಾಝಿ ಅವರ ಎಕ್ಸ್‌ ಖಾತೆ

ಭುವನೇಶ್ವರ: ಒಡಿಶಾದಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿಯ ಪ್ರಥಮ ಮುಖ್ಯಮಂತ್ರಿಯಾಗಿ ಬುಡಕಟ್ಟು ಜನಾಂಗದ ನಾಯಕ ಮೋಹನ್‌ ಚರಣ್ ಮಾಝಿ ಆಯ್ಕೆಯಾಗಿದ್ದಾರೆ.

ADVERTISEMENT

ನೂತನ ಸರ್ಕಾರದಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳು ಇರಲಿದ್ದಾರೆ. ಈ ಸ್ಥಾನಕ್ಕಾಗಿ ಕೆ.ವಿ.ಸಿಂಗ್ ದೇವ್ ಮತ್ತು ಪ್ರವತಿ ಪರಿದಾ ಅವರನ್ನು ಬಿಜೆಪಿಯ ಕೇಂದ್ರ ನಾಯಕತ್ವವು ಆಯ್ಕೆ ಮಾಡಿದೆ. 

‘ಪಕ್ಷದ ವೀಕ್ಷಕರ ಸಮ್ಮುಖದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಆಯ್ಕೆ ಅವಿರೋಧವಾಗಿ ನಡೆಯಿತು’ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಇಲ್ಲಿ ಪ್ರಕಟಿಸಿದರು.

ರಾಜನಾಥ್ ಸಿಂಗ್ ಹಾಗೂ ಕೇಂದ್ರ ಸಚಿವ ಭೂಪೇಂದರ್ ಯಾದವ್‌ ಅವರು ವೀಕ್ಷಕರಾಗಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದರು. ಆಯ್ಕೆ ಕುರಿತು ಸಿಂಗ್ ಅವರು ‘ಎಕ್ಸ್’ನಲ್ಲೂ ಪೋಸ್ಟ್ ಮಾಡಿದ್ದಾರೆ.

ಹೊಸ ಸರ್ಕಾರದ ಪ್ರಮಾಣ ವಚನ ಸಮಾರಂಭ ಇಲ್ಲಿನ ಜನತಾ ಮೈದಾನದಲ್ಲಿ ಬುಧವಾರ ನಡೆಯಲಿದೆ.

52 ವರ್ಷದ ಮಾಝಿ ಅವರು ಕಿಯೊನಿಹರ್ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದು, ಬಿಜೆಡಿ ಪಕ್ಷದ ಮಿನಾ ಮಾಝಿ ಅವರ ವಿರುದ್ಧ 11,577 ಮತಗಳ ಅಂತರದಿಂದ ಜಯಗಳಿಸಿದ್ದರು.

ಡಿಸಿಎಂಗಳಾಗಿ ಆಯ್ಕೆಯಾಗಿರುವ ಕೆ.ವಿ.ಸಿಂಗ್‌ ದೇವ್ ಅವರು ಪಟ್ನಾಗರ್ ಕ್ಷೇತ್ರದಿಂದ ಬಿಜೆಡಿಯ ಸರೋಜ್‌ ಕುಮಾರ್ ಮೆಹ್‌ ವಿರುದ್ಧ 1,357 ಮತಗಳಿಂದ ಜಯಗಳಿಸಿದ್ದರು. ಪ್ರವತಿ ಪರಿದಾ ಅವರು ನಿಮಪರ ಕ್ಷೇತ್ರದಿಂದ ಬಿಜೆಡಿಯ ದಿಲೀಪ್‌ ಕುಮಾರ್ ನಾಯಕ್ ವಿರುದ್ಧ 4,588 ಮತಗಳಿಂದ ಆಯ್ಕೆಯಾಗಿದ್ದಾರೆ.

ಪ್ರಧಾನಿ ಭಾಗಿ: ಪಕ್ಷದ ಮೂಲಗಳ ಪ್ರಕಾರ, ಬುಧವಾರ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಇತರೆ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.

147 ಸದಸ್ಯ ಬಲದ ವಿಧಾನಸಭೆಗೆ ಈಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 78 ಸ್ಥಾನಗಳಿಸಿ ಸ್ಪಷ್ಟ ಬಹುಮತ ಪಡೆದರೆ, ಅಧಿಕಾರ ಕಳೆದುಕೊಂಡ ಬಿಜೆಡಿ 51 ಸ್ಥಾನಗಳಿಸಲಷ್ಟೇ  ಶಕ್ತವಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.