ಭುವನೇಶ್ವರ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿರುವ ‘ಡಾನಾ’ ಚಂಡಮಾರುತ ರಾಜ್ಯದ ಮೇಲೆ ತೀವ್ರ ಪರಿಣಾಮ ಬೀರಲಿರುವ ಕಾರಣ ಒಡಿಶಾ ಸರ್ಕಾರ ತೀವ್ರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಚಂಡಮಾರುತದಿಂದಾಗುವ ಅಪಾಯ ತಪ್ಪಿಸಲು ಸರ್ಕಾರ ಈಗಾಗಲೇ ಕರಾವಳಿ ಪ್ರದೇಶದಲ್ಲಿರುವ ಜನರನ್ನು ಸ್ಥಳಾಂತರಗೊಳಿಸಲು ಆರಂಭಿಸಿದೆ. ಜತೆಗೆ ರಾಜ್ಯದ 14 ಜಿಲ್ಲೆಗಳಲ್ಲಿ 288 ರಕ್ಷಣಾ ತಂಡಗಳನ್ನು ಒಡಿಶಾ ಸರ್ಕಾರ ನೇಮಿಸಿದೆ.
19 ರಾಷ್ಟ್ರೀಯ ವಿಪತ್ತು ಪಡೆ, 51 ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ, 178 ಅಗ್ನಿಶಾಮಕ ಸಿಬಂದಿ ತಂಡ ಸೇರಿದಂತೆ 40 ಹೆಚ್ಚುವರಿ ತಂಡಗಳನ್ನು ನೇಮಿಸಿದೆ.
14 ಜಿಲ್ಲೆಗಳಿಂದ ಸುಮಾರು 10,60,336 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,
ನಾಳೆ, ನಾಡಿದ್ದು ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಇಂದು ಸಂಜೆಯಿಂದಲೇ ಗಾಳಿಯ ಬೀಸುವಿಕೆ ಆರಂಭವಾಗಲಿದೆ. ಕ್ರಮೇಣ ಗಾಳಿ ತೀವ್ರವಾಗಿ ಗಂಟೆಗೆ 80 ಕಿ.ಮೀ. ವೇಗದಲ್ಲಿ ಬೀಸಲಿದೆ. ನಾಡಿದ್ದು (ಅ.25) ಗಾಳಿಯ ವೇಗ ಗಂಟೆಗೆ 120 ಕಿ.ಮೀ ವೇಗದಲ್ಲಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಸಿದೆ.
ಸಮುದ್ರಕ್ಕೆ ಇಳಿಯುವುದು, ಮೀನುಗಾರಿಗೆಯನ್ನು ನಿಷೇಧಿಸಲಾಗಿದ್ದು, ಈಗಾಗಲೇ ಸಮುದ್ರದಲ್ಲಿರುವ ಮೀನುಗಾರರಿಗೆ ತೀರಕ್ಕೆ ವಾಪಸ್ಸಾಗುವಂತೆ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.