ಭುವನೇಶ್ವರ: ಫೋನಿ ಚಂಡಮಾರುತದಿಂದಾಗಿನಾಶವಾಗಿರುವ ಅರಣ್ಯ ಸಂಪತ್ತನ್ನು ಪುನಃ ಬೆಳೆಸುವ ಉದ್ದೇಶದಿಂದರಾಜ್ಯದ ಕರಾವಳಿ ಪ್ರದೇಶದ ಉದ್ದಕ್ಕೂ ಸಸಿ ನೆಡುವ ಕಾರ್ಯದಲ್ಲಿ ಒಡಿಶಾ ಸರ್ಕಾರ ತೊಡಗಿದೆ.
ಮುಖ್ಯ ಕಾರ್ಯದರ್ಶಿ ಎಪಿ ಪಾಧಿ ಅವರ ಅಧ್ಯಕ್ಷತೆಯಲ್ಲಿಶುಕ್ರವಾರ ನಡೆದ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ಸಿಕ್ಕಿದೆ.‘ಯೋಜನೆಯ ಪ್ರಕಾರ 2019–20ರಲ್ಲಿ130.5ಲಕ್ಷ ಸಸಿ ನೆಡುವ ಗುರಿ ಹಾಕಿಕೊಳ್ಳಲಾಗಿದೆ. 80.5 ಲಕ್ಷ ಸಸಿಗಳನ್ನು ಅರಣ್ಯ ಇಲಾಖೆ ನೆಡಲಿದೆ. ಉಳಿದ 50 ಲಕ್ಷ ಸಸಿಗಳನ್ನು ವಿವಿಧ ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳಿಗೆ ಹಾಗೂ ಖಾಸಗಿ ಭೂ ಮಾಲಿಕರಿಗೆ ನೀಡಲಾಗುವುದು’ ಎಂದರು.
‘ಚಂಡಮಾರುತದಿಂದಾಗಿ 20 ಲಕ್ಷಕ್ಕೂ ಅಧಿಕ ಮರಗಳು ಧರೆಗೆ ಉರುಳಿವೆ. ₹188 ಕೋಟಿಯ ಐದು ವರ್ಷ ಯೋಜನೆಯನ್ನು ರೂಪಿಸಲಾಗಿದೆ. ಹೆಚ್ಚು ಹಾನಿಗೊಳಗಾದ ಪುರಿ, ಭುವನೇಶ್ವರ ಹಾಗೂ ಕಠಕ್ ಪ್ರದೇಶದಲ್ಲಿ ಸಸಿ ನೆಡುವ ಕಾರ್ಯ ನಡೆಯಲಿದೆ’ ಎಂದು ಹೇಳಿದರು.
ಸಾರ್ವಜನಿಕರು, ಪಂಚಾಯತ್‌ಗಳು, ಸಾಮುದಾಯಿಕ ಸಂಸ್ಥೆಗಳು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ.
‘12 ಅರಣ್ಯ ವಿಭಾಗಗಳಿಂದ ಸೇರಿ ಒಟ್ಟು 104 ಲಕ್ಷ ಸಸಿಗಳು ಲಭ್ಯ ಇವೆ. ಪುರಿ, ಭುವನೇಶ್ವರ ಹಾಗೂ ಕಠಕ್‌ನ ರಸ್ತೆ ಬದಿ, ಉದ್ಯಾನಗಳಲ್ಲಿ ಸಸಿ ನೆಡಲಾಗುವುದು’ ಎಂದುಮುಖ್ಯ ಅರಣ್ಯ ರಕ್ಷಣಾ ಅಧಿಕಾರಿ ಸಂದೀಪ್ ತ್ರಿಪಾಠಿ ತಿಳಿಸಿದರು.
‘24,780 ಹೆಕ್ಟೇರ್‌ನಷ್ಟು ತೋಟಗಾರಿಕಾ ಪ್ರದೇಶಕ್ಕೆ ಫೋನಿ ಹೊಡೆತ ನೀಡಿದೆ. ಇಲ್ಲಿ 18 ಲಕ್ಷ ಹಣ್ಣಿನ ಮರಗಳನ್ನು ನೆಡಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಎಲ್ಲಾ ಕಾರ್ಯಕ್ಕೂ ನರೇಗಾದ ನಿಧಿಗಳನ್ನು ಬಳಸಿಕೊಳ್ಳಲಾಗುವುದು’ ಎಂದು ಅವರು ಹೇಳಿದರು.
‘ಭುವನೇಶ್ವರ ಸುತ್ತಮುತ್ತ ಭಾಗಶಃ ಬುಡಮೇಲಾದ ಮರಗಳನ್ನು ಪುನಃ ನೆಡುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ₹24 ಕೋಟಿ ಬಿಡುಗಡೆ ಮಾಡಲಾಗಿದೆ. ಇದುವರೆಗೂ ನಗರದಲ್ಲಿ 3,290 ಭಾಗಶಃ ಬುಡಮೇಲಾದ ಮರಗಳನ್ನು ಪುನಃ ನೆಡಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.