ಭುವನೇಶ್ವರ: ಗರ್ಭಿಣಿ ಉದ್ಯೋಗಿಗೆ ರಜೆ ನಿರಾಕರಿಸಿದ ಪರಿಣಾಮ, 7 ತಿಂಗಳ ಭ್ರೂಣವು ಹೊಟ್ಟೆಯೊಳಗೆ ಮೃತಪಟ್ಟ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸುವ ಉದ್ದೇಶದಿಂದ ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿಯನ್ನು (ಸಿಡಿಪಿಒ) ಅಮಾನತು ಮಾಡಿ ಒಡಿಶಾ ಸರ್ಕಾರ ಆದೇಶಿಸಿದೆ.
ಉಪ ಮುಖ್ಯಮಂತ್ರಿ ಪ್ರವತಿ ಪರಿದಾ ಅವರು ‘ಎಕ್ಸ್’ನಲ್ಲಿ, ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕಿಯಾದ ವರ್ಷಾ ಪ್ರಿಯದರ್ಶಿನಿ ಅವರ ಆರೋಪಕ್ಕೆ ಸಂಬಂಧಿಸಿದ ನಿಷ್ಪಕ್ಷಪಾತ ತನಿಖೆಗಾಗಿ ಸಿಡಿಪಿಒ ಸ್ನೇಹಲತಾ ಸಾಹೋ ಅವರನ್ನು ಅಮಾನತು ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
‘ತನಿಖಾ ವರದಿ ಸ್ವೀಕರಿಸಿದ ನಂತರ ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ವರ್ಷಾ ಪ್ರಿಯದರ್ಶಿನಿ ಅವರು, ‘ಅಕ್ಟೋಬರ್ 25ರಂದು ತೀವ್ರ ಹೊಟ್ಟೆ ನೋವು ಇದ್ದರೂ ರಜೆ ನೀಡದ ಕಾರಣ ಹೊಟ್ಟೆಯೊಳಗೆ ಮಗು ಮೃತಪಟ್ಟಿತು. ಆಸ್ಪತ್ರೆಗೆ ದಾಖಲಿಸುವಂತೆ ಮನವಿ ಮಾಡಿದದರೂ ಸಿಡಿಪಿಒ ಮತ್ತು ಇತರ ಅಧಿಕಾರಿಗಳು ಕಡೆಗಣಿಸಿದರು’ ಎಂದು ಹೇಳಿದ್ದಾರೆ.
ಈ ಮಧ್ಯೆ ಸಿಡಿಪಿಒ ಸ್ನೇಹಲತಾ ಅವರು, ‘ಪ್ರಿಯದರ್ಶಿನಿ ಅವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಎಂಬ ಬಗ್ಗೆ ತಿಳಿದಿರಲಿಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.