ADVERTISEMENT

ಒಡಿಶಾ ರೈಲು ಅಪಘಾತದ ಅಧಿಕೃತ ಸಾವಿನ ಸಂಖ್ಯೆ ಪ್ರಶ್ನಿಸಿದ ಬ್ಯಾನರ್ಜಿ: ಠಾಕೂರ್ ತಿರುಗೇಟು

ಪಿಟಿಐ
Published 5 ಜೂನ್ 2023, 5:13 IST
Last Updated 5 ಜೂನ್ 2023, 5:13 IST
ಅನುರಾಗ್‌ ಠಾಕೂರ್‌
ಅನುರಾಗ್‌ ಠಾಕೂರ್‌   

ನವದೆಹಲಿ: ಒಡಿಶಾ ರೈಲು ಅಪಘಾತದಲ್ಲಿ ಸಾವಿಗೀಡಾದವರ ಅಧಿಕೃತ ಸಂಖ್ಯೆಯನ್ನು ಪ್ರಶ್ನಿಸಿದ್ದಕ್ಕಾಗಿ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭಾನುವಾರ ತರಾಟೆಗೆ ತೆಗೆದುಕೊಂಡರು. ದುರಂತದ ಬಗ್ಗೆ ಯಾರೂ ರಾಜಕೀಯ ಮಾಡಬಾರದು ಎಂದು ಹೇಳಿದರು.

ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ಸಂಭವಿಸಿದ ಮೂರು ರೈಲುಗಳ ಅಪಘಾತದಲ್ಲಿ ಸುಮಾರು 275 ಜನರು ಮೃತಪಟ್ಟಿದ್ದು, 1,175 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಶಾಲಿಮಾರ್‌–ಚೆನ್ನೈ ಕೋರಮಂಡಲ್‌ ಎಕ್ಸ್‌ಪ್ರೆಸ್‌, ಬೆಂಗಳೂರು–ಹೌರಾ ಸೂಪರ್‌ ಫಾಸ್ಟ್‌ ಮತ್ತು ಸರಕು ಸಾಗಣೆ ರೈಲುಗಳ ನಡುವೆ ಅಪಘಾತ ಸಂಭವಿಸಿದ್ದು, ಇದು ಭಾರತದ ಅತ್ಯಂತ ದುರಂತ ರೈಲು ಅಪಘಾತಗಳಲ್ಲಿ ಒಂದಾಗಿದೆ. ತ್ರಿವಳಿ ರೈಲು ಅಪಘಾತದಲ್ಲಿ ರೈಲ್ವೆ ಸಚಿವಾಲಯ ನೀಡಿದ ಸಾವಿನ ಅಂಕಿಅಂಶಗಳನ್ನು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದು, ತಮ್ಮ ರಾಜ್ಯದ 61 ಜನರು ಮೃತಪಟ್ಟಿದ್ದು, 182 ಜನರು ಕಾಣೆಯಾಗಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ಕೋಲ್ಕತ್ತದಲ್ಲಿ ಬ್ಯಾನರ್ಜಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಒಂದು ರಾಜ್ಯದಿಂದ 182 ಮಂದಿ ನಾಪತ್ತೆಯಾಗಿದ್ದಾರೆ, 61 ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿದೆ. ಹಾಗಾದರೆ, ಅಂಕಿಅಂಶಗಳು ಎಷ್ಟು ಸರಿಯಿವೆ ಎಂದು ಪ್ರಶ್ನಿಸಿದ್ದರು.

ಮುಖ್ಯಮಂತ್ರಿ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅನುರಾಗ್‌ ಠಾಕೂರ್‌, ‘ಮಮತಾ ಬ್ಯಾನರ್ಜಿ ಅವರು ತಮ್ಮ ‘ಮಮತೆ’ಯನ್ನು ಕಳೆದುಕೊಂಡಿದ್ದಾರೆ. ಮೃತರ ಸಂಖ್ಯೆಯನ್ನು ಒಡಿಶಾ ಸರ್ಕಾರ ಖಚಿತಪಡಿಸಿದೆ. ಆ ರಾಜ್ಯವನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಆಳುತ್ತಿಲ್ಲ’ ಇಂತಹ ದುರಂತ ಘಟನೆಗಳನ್ನು ಮುಂದಿಟ್ಟುಕೊಂಡು ಯಾರೂ ರಾಜಕೀಯ ಮಾಡಬಾರದು, ಅಪಾರ ನಷ್ಟಕ್ಕೀಡಾದ ಸಂತ್ರಸ್ತರ ಕುಟುಂಬಗಳೊಂದಿಗೆ ಎಲ್ಲರೂ ನಿಲ್ಲುವ ಸಮಯ ಇದಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.