ADVERTISEMENT

ತ್ರಿವಳಿ ರೈಲು ಅಪಘಾತ: ಅಶ್ವಿನ್ ವೈಷ್ಣವ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

ಟಿ.ವಿ.ಯಲ್ಲಿ ನಡೆಯುವ ಯಾವುದೇ ಚರ್ಚೆಯಲ್ಲಿ ಪಕ್ಷದವರು ಪಾಲ್ಗೊಳ್ಳದಂತೆ ಕಾಂಗ್ರೆಸ್ ಸೂಚನೆ

ಪಿಟಿಐ
Published 3 ಜೂನ್ 2023, 11:40 IST
Last Updated 3 ಜೂನ್ 2023, 11:40 IST

ನವದೆಹಲಿ: ಒಡಿಶಾದ ಬಾಲೇಸೋರ್‌ನಲ್ಲಿ ಶುಕ್ರವಾರ ಸಂಭವಿಸಿದ ಭೀಕರ ತ್ರಿವಳಿ ರೈಲು ಅಪಘಾತದ ನೈತಿಕ ಹೊಣೆಹೊತ್ತು ರೈಲ್ವೆ ಸಚಿವ ಅಶ್ವಿನ್ ವೈಷ್ಣವ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.

ಒಡಿಶಾದ ಸಂಸದ ಕಾಂಗ್ರೆಸ್‌ನ ಸಪ್ತಗಿರಿ ಉಲಾಖ ಅವರು ಟ್ವೀಟ್ ಮಾಡಿ, ’ರೈಲ್ವೆ ಸಚಿವ ಮೊದಲು ರಾಜೀನಾಮೆ ನೀಡಬೇಕು. ಈ ಭೀಕರ ದುರಂತ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಎಲ್ಲಾ ರೀತಿಯ ನೆರವು ನೀಡಬೇಕು‘ ಎಂದು ಆಗ್ರಹಿಸಿದ್ದಾರೆ.

ಎಐಸಿಸಿ ಅಧ್ಯಕ್ಷರ ಕಚೆರಿಯ ಸಂಯೋಜಕ ಗುರುದೀಪ್ ಸಪ್ಪಾಲ್ ಪ್ರತಿಕ್ರಿಯಿಸಿ, ’ಇಂಥ ಸಂದರ್ಭದಲ್ಲಿ ನೈತಿಕ ಆಧಾರದಲ್ಲಿ ಮಾತ್ರವಲ್ಲ, ಉನ್ನತ ಮಟ್ಟದ ತನಿಖೆಗೆ ಅಧಿಕಾರದಲ್ಲಿರುವವರು ಪ್ರಭಾವ ಬೀರುವುದನ್ನು ತಪ್ಪಿಸಲು ರಾಜೀನಾಮೆ ಅಗತ್ಯ‘ ಎಂದರು.

ADVERTISEMENT

ಘಟನೆ ಕುರಿತಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿ, ’ದೇಶದ ಇಂಥ ದೊಡ್ಡ ದುರಂತದ ಸಂದರ್ಭದಲ್ಲಿ ಕಾಂಗ್ರೆಸ್‌ನ ಎಲ್ಲಾ ಮುಖಂಡರು ಒಡಿಶಾ ದುರಂತದಲ್ಲಿ ನೊಂದವರ ರಕ್ಷಣೆಗೆ ತಮ್ಮ ಕೈಲಾದಷ್ಟು ನೆರವು ನೀಡಬೇಕು‘ ಎಂದು ಸೂಚಿಸಿದ್ದಾರೆ.

’ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರ ತಕ್ಷಣವೇ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಹಾರ ಕಾರ್ಯಗಳು ತ್ವರಿತಗತಿಯಲ್ಲಿ ತಲುಪುವಂತೆ ಮಾಡಲು ಪಕ್ಷದ ಕಾರ್ಯಕರ್ತರಿಗೆ ಹಾಗೂ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳಿಗೆ ಅಗತ್ಯ ಮಾರ್ಗದರ್ಶನ ಮಾಡುವಂತೆ ತಿಳಿಸಿದ್ದಾರೆ‘ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದರು.

’ದುರಂತಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವು ಉತ್ತರಿಸಬೇಕು‘ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ.

ಈ ನಡುವೆ ಟಿ.ವಿ. ಮಾಧ್ಯಮಗಳಲ್ಲಿ ನಡೆಯುವ ಯಾವುದೇ ಚರ್ಚೆಯಲ್ಲಿ ಕಾಂಗ್ರೆಸ್ ನಾಯಕರು ಭಾಗವಹಿಸದಂತೆ ಪಕ್ಷ ಸೂಚನೆ ನೀಡಿದೆ. ಇಂಥ ದುರಂತದ ಸಮಯದಲ್ಲಿ ನೊಂದ ಕುಟುಂಬದವರೊಂದಿಗೆ ನಿಲ್ಲಬೇಕಾದ್ದು ನಮ್ಮ ಕರ್ತವ್ಯ. ಹೀಗಾಗಿ ದುರಂತ ಕುರಿತ ಯಾವುದೇ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ‘ ಎಂದು ಪಕ್ಷ ಟ್ವೀಟ್ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.