ADVERTISEMENT

ಬೆಳ್ಳಿ ರೇಸರ್‌ನಿಂದ ಶೇವ್‌ ಮಾಡಿ ಮಾಜಿ ಯೋಧರಿಗೆ ಕೃತಜ್ಞತೆ 

ಏಜೆನ್ಸೀಸ್
Published 29 ಜೂನ್ 2018, 1:55 IST
Last Updated 29 ಜೂನ್ 2018, 1:55 IST
ಚಿತ್ರ: ಎಎನ್‌ಐ ಟ್ವೀಟ್
ಚಿತ್ರ: ಎಎನ್‌ಐ ಟ್ವೀಟ್   

ಬುಲ್ದಾನ(ಮಹಾರಾಷ್ಟ್ರ):ಕ್ಷೌರ ವಿಚಾರವಾಗಿ ಒಂದಿಲ್ಲೊಂದು ಸುದ್ದಿಯಾಗುತ್ತಲೇ ಇರುತ್ತವೆ. ಸಿನಿಮಾ, ಕ್ರಿಕೆಟ್‌ ತಾರೆಯರ ಕೇಶ ವಿನ್ಯಾಸ ಆಗಾಗ ಬಾರಿ ಸುದ್ದಿ ಮಾಡಿದ್ದೂ ಉಂಟು. ಇವುಗಳನ್ನು ನೋಡಿ ಮಕ್ಕಳು, ಯುವಕರು ತಮ್ಮ ನೆಚ್ಚಿನ ತಾರೆಯರ, ಕ್ರಿಕೆಟ್‌ ಆಟಗಾರರು ಮಾಡಿಸಿಕೊಳ್ಳುವ ಕೇಶ ವಿನ್ಯಾಸವನ್ನು ತಾವೂ ಮಾಡಿಸಿಕೊಳ್ಳಲು ಮುಂದಾಗುತ್ತಾರೆ.

ಇನ್ನು ಕೆಲ ಕ್ಷೌರಿಕ ವೃತ್ತಿಯಲ್ಲಿರುವವರು ಹಲವರ ಜನ್ಮದಿನಗಳಂದು ಉಚಿತ ಕ್ಷೌರ ಸೇವೆ ನೀಡಿದ್ದೂ ಇದೆ. ಮತ್ತೊಂದೆಡೆ ದಲಿತರಿಗೆ ಕ್ಷೌರ ಮಾಡಲು ಕೆಲ ಗ್ರಾಮಗಳಲ್ಲಿ ನಿರಾಕರಿಸಿದ ಘಟನೆಗಳೂ ನಡೆದಿವೆ.

ಈ ಎಲ್ಲಾ ಸಂಗತಿಗಳ ನಡುವೆ ಗಮನ ಸೆಳೆಯುವ ಸುದ್ದಿಯೊಂದಿದೆ. ದೇಶ ಕಾಯುವ, ತಮ್ಮ ಜೀವವನ್ನೇ ಮುಡಿಪಾಗಿಟ್ಟು ಹೋರಾಡುವ ತ್ಯಾಗ ಮನೋಭಾವದ ಸೇವೆ ಸಲ್ಲಿಸಿದ ನಿವೃತ್ತ ಯೋಧರಿಗೆ ಉಚಿತವಾಗಿ ಕ್ಷೌರ ಮಾಡಿ, ಬೆಳ್ಳಿ ರೇಸರ್‌ನಿಂದ ಸೇವ್‌ ಮಾಡಿ ಕೃತಜ್ಞತೆ ಸಲ್ಲಿಸುತ್ತಿದ್ದಾರೆ ಉದ್ಧವ್‌ ಗಡ್ಕರ್‌ ಎಂಬುವರು.

ADVERTISEMENT

ಈ ಬಗೆಯಲ್ಲಿ ನಿವೃತ್ತ ಯೋಧರಿಗೆ ಸೇವೆ ಸಲ್ಲಿಸುತ್ತಿರುವುದು ಮಹಾರಾಷ್ಟ್ರದ ಬುಲ್ದಾನದಲ್ಲಿ. ಉದ್ಧವ್‌ ಗಡ್ಕರ್‌ ಅವರು ತಮ್ಮ ಶಾಪ್‌ನಲ್ಲಿ ನಿವೃತ್ತ ಯೋಧರಿಗೆ ಉಚಿತವಾಗಿ ಕ್ಷೌರ ಮಾಡುತ್ತಾ ಬೆಳ್ಳಿ ರೇಸರ್‌ನಿಂದ ಶೇವ್‌ ಮಾಡುತ್ತಿದ್ದಾರೆ.

‘ನಾನು ಸಾಮಾಜಿಕ ಸೇವೆ ಮಾಡಲು ಬಯಸಿದ್ದೇನೆ. ಸೈನಿಕರು ನಮಗಾಗಿ ಸಾಕಷ್ಟು ತ್ಯಾಗ ಮಾಡುತ್ತಾರೆ. ಅವರಿಗೆ ಈ ಮೂಲಕ ಕನಿಷ್ಠ ಕೃತಜ್ಞತೆ ಸಲ್ಲಿಸುವುದು ನನ್ನ ಉದ್ದೇಶ’ ಎಂದು ಉದ್ಧವ್‌ ಗಡ್ಕರ್‌ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ಕುರಿತು ಎಎನ್‌ಐ ವರದಿ ಮಾಡಿದೆ.

ದೇಶ ಕಾಯುವ ಯೋಧರಿಗೆ ತಮ್ಮ ಕೈಲಾದ ಸೇವೆ ಮಾಡುತ್ತಿರುವ ಉದ್ಧವ್‌ ಗಡ್ಕರ್‌ ಅವರ ಉದ್ದೇಶ ಸಾರ್ಥಕವಾದುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.