ಕೋಲ್ಕತ್ತ: ರ್‍ಯಾಗಿಂಗ್ ಮತ್ತು ಲೈಂಗಿಕ ಕಿರುಕುಳಕ್ಕೆ ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬರು ಬಲಿಯಾದ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ ಆನಂದ ಬೋಸ್ ಗುರುವಾರ ತುರ್ತಾಗಿ ಪರಿಸ್ಥಿತಿ ಅವಲೋಕನ ಸಭೆ ನಡೆಸಿದರು. ಈ ಸಭೆಗೆ ವಿವಿಯ ನೂತನ ಉಪ ಕುಲಪತಿ ಬುದ್ಧದೇಬ್ ಸೌ ಹಾಜರಾದರು.
ರಾಜಭವನದಲ್ಲಿ ನಿಗದಿಯಾಗಿದ್ದ ಸಭೆಯಲ್ಲಿ ಬುದ್ಧದೇಬ್ ಅವರು ವಿಶ್ವವಿದ್ಯಾಲಯದ ಕಾರ್ಯನಿರ್ವಹಣೆ ಕುರಿತು ವಿವರಿಸಿದ್ದಾರೆ.
ಸಹಪಾಠಿಗಳ ಕಿರುಕುಳ, ಲೈಂಗಿಕ ದೌರ್ಜನ್ಯದಿಂದ ಬೇಸತ್ತ 17 ವರ್ಷದ ಪದವಿ ಪೂರ್ವ ವಿದ್ಯಾರ್ಥಿಯೊಬ್ಬರು ಈ ತಿಂಗಳ 9ರಂದು ವಿ.ವಿಯ ಬಾಲಕರ ಹಾಸ್ಟೆಲ್‌ನ ಎರಡನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದರು.
ಸಂತ್ರಸ್ತ ವಿದ್ಯಾರ್ಥಿಯ ಬಟ್ಟೆ ಕಳಚಿ ಹಾಸ್ಟೆಲ್ ಅವರಣದಲ್ಲಿ ಮೆರವಣಿಗೆ ಮಾಡಲಾಗಿತ್ತು. ಕಿರುಕುಳ ತಪ್ಪಿಸಿಕೊಳ್ಳಲು ವಿದ್ಯಾರ್ಥಿಯು ಕೊಠಡಿಯಿಂದ ಕೊಠಡಿಗೆ ಅಡ್ಡಾಡಿದ್ದರು ಎಂದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ ಎನ್ನಲಾಗಿದೆ. ಈ ಪ್ರಕರಣ ರ್‍ಯಾಗಿಂಗ್ ಪಿಡುಗಿನ ಕುರಿತು ಪಶ್ಚಿಮ ಬಂಗಾಳದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಯ ವಿದ್ಯಾರ್ಥಿಗಳು, ಹಳೇ ವಿದ್ಯಾರ್ಥಿಗಳೂ ಸೇರಿ 13 ಮಂದಿಯನ್ನು ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.