ನವದೆಹಲಿ: ಕೊಲೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಒಲಿಂಪಿಯನ್ ಕುಸ್ತಿಪಟು ಸುಶೀಲ್ ಕುಮಾರ್ ಮತ್ತು ಸಹಚರರು, ಕೆಲವು ವ್ಯಕ್ತಿಗಳಿಗೆ ದೊಣ್ಣೆಯಿಂದ ಬಾರಿಸುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಆ ವಿಡಿಯೊ ಗುರುವಾರದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ವ್ಯಕ್ತಿಯೊಬ್ಬ ಗಾಯದಿಂದ ಒದ್ದಾಡುತ್ತ ನೆಲಕ್ಕೆ ಉರುಳಿದ್ದಾನೆ. ಸುಶೀಲ್ ಕುಮಾರ್ ಮತ್ತು ಅವರ ಸಹಚರರು ದೊಣ್ಣೆಗಳನ್ನು ಹಿಡಿದು ಹೊಡೆಯುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ವಿಡಿಯೊದ ನೈಜತೆಯ ಕುರಿತಂತೆ ದೆಹಲಿ ಪೊಲೀಸರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಛತ್ರಸಾಲಾ ಕ್ರೀಡಾಂಗಣದಲ್ಲಿ ನಡೆದಿದ್ದ ಜಗಳದಲ್ಲಿ ಹಲ್ಲೆಗೊಳಗಾಗಿದ್ದ 23 ವರ್ಷದ ಕುಸ್ತಿಪಟು ಸಾಗರ್ ಅಸುನೀಗಿದ್ದರು. ಇದೇ ಪ್ರಕರಣದಲ್ಲಿ ಸುಶೀಲ್ ಕುಮಾರ್ ಸೇರಿದಂತೆ ಈವರೆಗೆ ಒಟ್ಟು ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಯಲ್ಲಿ ಸಾಗರ್ ಸಾವಿಗೀಡಾದರೆ, ಅವರ ಇಬ್ಬರು ಸ್ನೇಹಿತರು ಗಂಭೀರ ಗಾಯಗೊಂಡಿದ್ದರು. ಮಾಡೆಲ್ ಟೌನ್ ಪ್ರದೇಶದಲ್ಲಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮೇ 4ರ ರಾತ್ರಿ ಜಗಳ ನಡೆದಿತ್ತು. ಭಾನುವಾರ, ಸುಶೀಲ್ ಕುಮಾರ್ ಅವರನ್ನು ಬಂಧಿಸಲಾಯಿತು. ಅವರ ಸಹಚರರಾದ ಭೂಪೇಂದರ್ (38), ಮೋಹಿತ್ (22), ಗುಲಾಬ್ (24) ಅವರನ್ನು ಹರಿಯಾಣದ ಝಜ್ಜರ್ ಜಿಲ್ಲೆಯಿಂದ ಹಾಗೂ ರೋಹ್ಟಕ್‌ನಿಂದ ಮಂಜೀತ್ (29) ಎಂಬುವವರನ್ನು ಬಂಧಿಸಲಾಗಿದೆ.
ಸುಶೀಲ್ ಕುಮಾರ್ ನಿತ್ಯವು ಘಟನೆಯ ಕುರಿತು ಒಂದೊಂದು ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ, ದಿನವೂ ಬೇರೆ ಬೇರೆ ಕಥೆಗಳನ್ನು ಹೇಳುತ್ತಿದ್ದಾರೆ ಎಂದು ವಿಚಾರಣೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತನಿಖಾ ತಂಡವು ಸುಶೀಲ್ ಕುಮಾರ್ ಅವರ ಮೊಬೈಲ್ ಫೋನ್‌ಗಾಗಿ ಶೋಧ ಕಾರ್ಯ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.