ADVERTISEMENT

ಜಮ್ಮು–ಕಾಶ್ಮೀರ: ಸರ್ಕಾರ ರಚನೆಗೆ ಇಂದು ಹಕ್ಕುಮಂಡನೆ

ನ್ಯಾಷನಲ್‌ ಕಾನ್ಫರೆನ್ಸ್‌ ಎಲ್‌ಪಿ ನಾಯಕನಾಗಿ ಒಮರ್ ಆಯ್ಕೆ, ನಾಲ್ವರು ಪಕ್ಷೇತರರ ಬೆಂಬಲ

ಪಿಟಿಐ
Published 10 ಅಕ್ಟೋಬರ್ 2024, 10:01 IST
Last Updated 10 ಅಕ್ಟೋಬರ್ 2024, 10:01 IST
<div class="paragraphs"><p>ಒಮರ್ ಅಬ್ದುಲ್ಲಾ</p></div>

ಒಮರ್ ಅಬ್ದುಲ್ಲಾ

   

(ಪಿಟಿಐ ಚಿತ್ರ)

ಶ್ರೀನಗರ: ‘ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್‌ ಕಾನ್ಫರೆನ್ಸ್‌ನ ಶಾಸಕಾಂಗ ಪಕ್ಷದ ನಾಯಕರಾಗಿ ಒಮರ್ ಅಬ್ದುಲ್ಲಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ’ ಎಂದು ಪಕ್ಷದ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ತಿಳಿಸಿದರು.

ADVERTISEMENT

‘ನಾಯಕನ ಆಯ್ಕೆಗಾಗಿ ಗುರುವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲ ಸದಸ್ಯರು ಒಮರ್ ಅಬ್ದುಲ್ಲಾ ಆಯ್ಕೆಯನ್ನು ಬೆಂಬಲಿಸಿದರು’ ಎಂದು ಫಾರೂಕ್‌ ಅಬ್ದುಲ್ಲಾ ತಿಳಿಸಿದರು. ಪಕ್ಷದ ಕಚೇರಿ ‘ನವಾ ಐ ಸುಭಾ’ದಲ್ಲಿ ಸಭೆ ನಡೆಯಿತು.

ಒಮರ್ ಅವರನ್ನು ಬೆಂಬಲಿಸುವ ಪತ್ರವನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಈ ಮೂಲಕ ಮಾಜಿ ಮುಖ್ಯಮಂತ್ರಿ, 54 ವರ್ಷ ವಯಸ್ಸಿನ ಒಮರ್ ಅಬ್ದುಲ್ಲಾ ಮತ್ತೆ ಮುಖ್ಯಮಂತ್ರಿಯ ಗಾದಿಗೆ ಏರುವ ಹಾದಿಯು ಸುಗಮವಾದಂತಾಗಿದೆ.

50ಕ್ಕೂ ಹೆಚ್ಚು ಶಾಸಕರ ಬೆಂಬಲದೊಂದಿಗೆ ಶುಕ್ರವಾರದಂದು ಲೆಫ್ಟಿನೆಂಟ್ ಗವರ್ನರ್ ಮನೋಜ್‌ ಸಿನ್ಹಾ ಅವರನ್ನು ಭೇಟಿಯಾಗಲಿರುವ ಒಮರ್ ಅಬ್ದುಲ್ಲಾ ಅವರು, ಸರ್ಕಾರವನ್ನು ರಚಿಸಲು ಹಕ್ಕು ಪ್ರತಿಪಾದಿಸಲಿದ್ದಾರೆ.

ನಾಲ್ವರು ಪಕ್ಷೇತರರ ಬೆಂಬಲ: ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಒಮರ್ ಅಬ್ದುಲ್ಲಾ, ‘ಏಳು ಮಂದಿ ಪಕ್ಷೇತರ ಶಾಸಕರ ಪೈಕಿ ನಾಲ್ವರು ನ್ಯಾಷನಲ್‌ ಕಾನ್ಫರೆನ್ಸ್‌ ಬೆಂಬಲಿಸಿದ್ದಾರೆ’ ಎಂದು ತಿಳಿಸಿದರು.

ವಿಧಾನಸಭೆಗೆ ಈಚೆಗೆ ನಡೆದಿದ್ದ ಚುನಾವಣೆಯಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷ 42 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಮೈತ್ರಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಸಿಪಿಎಂ ಕ್ರಮವಾಗಿ ಆರು ಮತ್ತು ಒಂದು ಸ್ಥಾನ ಗೆದ್ದುಕೊಂಡಿದ್ದವು.

ನಾಲ್ವರು ಪಕ್ಷೇತರರು ಬೆಂಬಲ ಘೋಷಿಸಿರುವ ಕಾರಣ ಸರ್ಕಾರ ರಚನೆಗೆ ಅಗತ್ಯವಿರುವ ಸರಳ ಬಹುಮತವನ್ನು ನ್ಯಾಷನಲ್ ಕಾನ್ಫರೆನ್ಸ್‌ ಪಡೆದಂತಾಗಿದೆ. ತಾಂತ್ರಿಕವಾಗಿ ಚುನಾವಣಾ ಪೂರ್ವ ಮೈತ್ರಿಪಕ್ಷಗಳ ಬೆಂಬಲವೂ ಎನ್‌ಸಿಗೆ ಅಗತ್ಯವಿಲ್ಲ.

ಇದಕ್ಕೂ ಮುನ್ನ ಒಮರ್ ಅಬ್ದುಲ್ಲಾ ಅವರು ಮೈತ್ರಿ ಪಕ್ಷಗಳ ಜೊತೆಗೆ ಚರ್ಚಿಸಿದ ಬಳಿಕ ರಾಜಭವನಕ್ಕೆ ತೆರಳಿ ಸರ್ಕಾರ ರಚನೆಗೆ ಹಕ್ಕು ಪ್ರತಿಪಾದಿಸಲಿದ್ದು, ಪ್ರಮಾಣವಚನಕ್ಕೆ ಸಮಯ ನಿಗದಿಪಡಿಸುವಂತೆ ಕೋರಲಾಗುವುದು ಎಂದು ತಿಳಿಸಿದ್ದರು. ಒಮರ್ ಅಬ್ದುಲ್ಲಾ ಅವರು ಈ ಹಿಂದೆ 2009ರಿಂದ 2015ರವರೆಗೆ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.