ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್‌ನ (ಎನ್‌ಸಿ) ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರು ಜಮ್ಮು–ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.
ಜಮ್ಮು–ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಒಮರ್ ಅಬ್ದುಲ್ಲಾ ಅವರಿಗೆ ಪ್ರಮಾಣ ವಿಧಿ ಬೋಧಿಸಿದರು.
ಪಕ್ಷದ ಹಿರಿಯ ನಾಯಕ ಸುರಿಂದರ್ ಚೌಧರಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪಕ್ಷದ ನಾಯಕರಾದ ಸಕಿನಾ ಇಟೂ, ಜಾವೇದ್ ದರ್, ಜಾವೇದ್ ರಾಣಾ ಹಾಗೂ ಸತೀಶ್ ಶರ್ಮಾ ಅವರು ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.
ಸಂವಿಧಾನದ 370ನೇ ವಿಧಿ ಅನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ನಂತರ ಅಸ್ತಿತ್ವಕ್ಕೆ ಬಂದಿರುವ ಜಮ್ಮು–ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಒಮರ್ ಅಬ್ದುಲ್ಲಾ ಪಾತ್ರರಾಗಿದ್ದಾರೆ. ಅಲ್ಲದೇ, ಒಮರ್, ಎರಡನೇ ಬಾರಿಗೆ ಮುಖ್ಯಮಂತ್ರಿಯಾದಂತಾಗಿದೆ.
ಇಲ್ಲಿನ ಎಸ್.ಕೆ.ಇಂಟರ್‌ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ‘ಇಂಡಿಯಾ’ ಮೈತ್ರಿಕೂಟದ ನಾಯಕರಾದ ಕಾಂಗ್ರೆಸ್‌ನ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಡಿಎಂಕೆಯ ಕನಿಮೊಳಿ, ಎನ್‌ಸಿಪಿ (ಶರದ್ ಪವಾರ್ ಬಣ)ಯ ಸುಪ್ರಿಯಾ ಸುಳೆ, ಸಿಪಿಐನ ಡಿ.ರಾಜಾ, ಎಎಪಿಯ ಸಂಜಯ್ ಸಿಂಗ್ ಪಾಲ್ಗೊಂಡಿದ್ದರು. ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕೂಡ ಇದ್ದರು.
ಜಮ್ಮು–ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆಯಾಗಿದೆ. ಇಲ್ಲಿಗೆ ರಾಜ್ಯ ಸ್ಥಾನಮಾನ ಮರುಸ್ಥಾಪನೆ ಮಾಡುವುದಕ್ಕಾಗಿ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಒಟ್ಟಾಗಿ ಹೋರಾಡಲಿವೆಮಲ್ಲಿಕಾರ್ಜುನ ಖರ್ಗೆ,ಎಐಸಿಸಿ ಅಧ್ಯಕ್ಷ
ಸಿ.ಎಂ ಆಗುವುದು ಎಂದರೆ ‘ಮುಳ್ಳಿನ ಕಿರೀಟ’ ಧರಿಸಿದಂತೆ. ಮಗನ ಮುಂದೆ ಸವಾಲುಗಳಿವೆ. ಈ ಸಾವಲುಗಳನ್ನು ಎದುರಿಸಲು ಆತನಿಗೆ ಅಲ್ಲಾಹ ಆಶೀರ್ವದಿಸುತ್ತಾನೆ ಎಂಬ ನಂಬಿಕೆ ಇದೆಫಾರೂಕ್ ಅಬ್ದುಲ್ಲಾ, ಎನ್‌ಸಿ ಅಧ್ಯಕ್ಷ
ಸಂಪುಟಕ್ಕೆ ಸೇರದ ಕಾಂಗ್ರೆಸ್
ಎನ್‌ಸಿ ಮಿತ್ರಪಕ್ಷವಾದ ಕಾಂಗ್ರೆಸ್ ನೂತನ ಸಚಿವ ಸಂಪುಟದಿಂದ ಹೊರಗುಳಿಯಲು ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.
‘ಒಂದು ಸಚಿವ ಸ್ಥಾನವನ್ನು ಕಾಂಗ್ರೆಸ್ ನೀಡಲಾಗಿತ್ತು. ಪಕ್ಷ ಅದನ್ನು ನಿರಾಕರಿಸಿತಲ್ಲದೇ, ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಲು ನಿರ್ಧರಿಸಿತು’ ಎಂದು ಮೂಲಗಳು ಹೇಳಿವೆ.
‘ಸದ್ಯಕ್ಕೆ ಜಮ್ಮು–ಕಾಶ್ಮೀರ ಸರ್ಕಾರವನ್ನು ಪಕ್ಷ ಸೇರುತ್ತಿಲ್ಲ. ಜಮ್ಮು–ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಸ್ಥಾಪನೆ ಮಾಡಬೇಕು ಎಂಬುದು ಕಾಂಗ್ರೆಸ್‌ನ ಬಲವಾದ ಬೇಡಿಕೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಹಲವಾರು ಸಾರ್ವಜನಿಕ ಸಭೆಗಳಲ್ಲಿ ಇದೇ ಭರವಸೆ ನೀಡಿದ್ದಾರೆ. ಈ ಬೇಡಿಕೆ ಈಡೇರಬೇಕು’ ಎಂದು ಕಾಂಗ್ರೆಸ್ ಪಕ್ಷದ ಜಮ್ಮು–ಕಾಶ್ಮೀರ ಘಟಕದ ಅಧ್ಯಕ್ಷ ತಾರಿಕ್ ಹಮೀದ್ ಕರ‍್ರಾ ಹೇಳಿದರು.
ಇದೇ ವಿಚಾರವಾಗಿ, ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ‘ಕಾಂಗ್ರೆಸ್ ಪಕ್ಷ ಸದ್ಯಕ್ಕೆ ಸಂಪುಟ ಸೇರುತ್ತಿಲ್ಲ. ಆದರೆ, ಆ ಪಕ್ಷದೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ’ ಎಂದರು.
‘ಎರಡೂ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಇದ್ದಿದ್ದರೆ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರಲಿಲ್ಲ. ಅವರ ಉಪಸ್ಥಿತಿ ಮೈತ್ರಿಕೂಟ ಗಟ್ಟಿಯಾಗಿದ್ದು, ಜಮ್ಮು–ಕಾಶ್ಮೀರ ಜನರ ಅಭ್ಯುದಯಕ್ಕೆ ನಾವು ಶ್ರಮಿಸುತ್ತೇವೆ ಎಂಬುದನ್ನು ಸೂಚಿಸುತ್ತದೆ’ ಎಂದರು.
‘ಸಂಪುಟ ಸೇರುವ ಕುರಿತು ನಿರ್ಧಾರ ಕೈಗೊಳ್ಳುವುದು ಕಾಂಗ್ರೆಸ್‌ಗೆ ಬಿಟ್ಟದ್ದು. ಈ ಸಂಬಂಧ ಅವರೊಂದಿಗೆ ಚರ್ಚೆ ನಡೆಸುತ್ತಿದ್ದೇವೆ’ ಎಂದರು.
‘ಜಮ್ಮು–ಕಾಶ್ಮೀರದಲ್ಲಿ ವಿಧಾನಸಭೆ ಮಾತ್ರ ಇದೆ. ಹೀಗಾಗಿ ಸಂಪುಟದ ಗಾತ್ರ ವಿಚಾರವಾಗಿ ನಿರ್ಬಂಧ ಇದೆ’ ಎಂದರು.
‘40 ಅಥವಾ 45 ಸಚಿವರನ್ನು ಒಳಗೊಂಡ ಸಂಪುಟವಿದ್ದ ಕಾಲ ಮುಗಿಯಿತು’ ಎಂದ ಅವರು, ‘ಮುಫ್ತಿ ಸಯೀದ್ ನೇತೃತ್ವದ ಸರ್ಕಾರದಲ್ಲಿ ಎಲ್ಲ ಶಾಸಕರಿಗೆ ಸಚಿವ ದರ್ಜೆ ಒದಗಿಸಲಾಗಿತ್ತು’ ಎಂದು ಮೆಲುಕು ಹಾಕಿದರು.
‘ರಾಜ್ಯ ಸ್ಥಾನಮಾನ ಮರುಸ್ಥಾಪನೆ ಶೀಘ್ರ’
‘ಜಮ್ಮು–ಕಾಶ್ಮೀರ ಬಹು ದಿನಗಳ ಕಾಲ ಕೇಂದ್ರಾಡಳಿತ ಪ್ರದೇಶವಾಗಿ ಉಳಿಯುವುದಿಲ್ಲ ಹಾಗೂ ಶೀಘ್ರವೇ ರಾಜ್ಯ ಸ್ಥಾನಮಾನ ಮರುಸ್ಥಾಪನೆಯಾಗುವ ಆಶಾಭಾವ ಹೊಂದಿದ್ಧೇನೆ’ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದರು.
ಪಿಟಿಐ ವಿಡಿಯೊ ಜೊತೆ ಮಾತನಾಡಿ ಅವರು ಈ ಆಶಯ ವ್ಯಕ್ತಪಡಿಸಿದ್ದಾರೆ.
‘ನನ್ನ ವಾಹನ ಸಂಚರಿಸುವ ಸಂದರ್ಭದಲ್ಲಿ ‘ಗ್ರೀನ್ ಕಾರಿಡಾರ್’ ಇರಕೂಡದು. ಈ ಬಗ್ಗೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ’ ಎಂದರು. ‘ನನ್ನದು ಎಲ್ಲರನ್ನೂ ಒಳಗೊಳ್ಳುವ ಸರ್ಕಾರ. ಇದೇ ಕಾರಣಕ್ಕೆ, ನೌಶೇರಾ ಕ್ಷೇತ್ರದ ಶಾಸಕ ಸುರೇಂದ್ರ ಚೌಧರಿ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಜಮ್ಮು ಭಾಗದ ಜನರಿಗೂ ಸರ್ಕಾರದಲ್ಲಿ ಅವಕಾಶ ನೀಡಬೇಕು. ಸರ್ಕಾರದಲ್ಲಿ ತಮಗೆ ಪ್ರಾತಿನಿಧ್ಯ ಇಲ್ಲ ಎಂಬ ಭಾವನೆ ಅವರಲ್ಲಿ ಮೂಡಲು ಅವಕಾಶ ನೀಡುವುದಿಲ್ಲ ಎಂದು ನಾನು ಈ ಹಿಂದೆಯೇ ಹೇಳಿದ್ದೆ’ ಎಂದು ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.