ಶ್ರೀನಗರ:ನಾನು, ನನ್ನ ತಂದೆ ಹಾಗೂ ಸಂಸದ ಫಾರೂಕ್ ಅಬ್ದುಲ್ಲಾ ಸೇರಿದಂತೆ ನಮ್ಮ ಕುಟುಂಬ ಸದಸ್ಯರನ್ನುಅಧಿಕಾರಿಗಳು ಗೃಹಬಂಧನದಲ್ಲಿರಿಸಿದ್ದಾರೆ ಎಂದು ಜಮ್ಮು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಭಾನುವಾರ ಆರೋಪಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಪೊಲೀಸ್ ಅಧಿಕಾರಿಗಳು, ಪುಲ್ವಾಮಾ ದಾಳಿಯ ಎರಡನೇ ವರ್ಷದ ಹಿನ್ನೆಲೆಯಲ್ಲಿ ಮುನ್ನಚ್ಚೆರಿಕಾ ಕ್ರಮವಾಗಿ ಸಂರಕ್ಷಿತ ವ್ಯಕ್ತಿಗಳು ಹಾಗೂ ವಿಐಪಿಗಳ ಚಲನೆಯನ್ನು ತಡೆಯಲಾಗಿದೆ ಎಂದು ತಿಳಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಒಮರ್ ಅಬ್ದುಲ್ಲಾ, ಇದೇನಾ ಆಗಸ್ಟ್ 2019ರ ನಂತರದ ಹೊಸ ಜಮ್ಮು ಮತ್ತು ಕಾಶ್ಮೀರ? ಯಾವುದೇ ವಿವರಣೆಯಿಲ್ಲದೆ ನಮ್ಮನ್ನು ಬಂಧಿಯಾಗಿಡಲಾಗಿದೆ. ನನ್ನ ಅಪ್ಪ, ಸಂಸದ ಫಾರೂಕ್ ಅಬ್ದುಲ್ಲಾ ಅವರನ್ನು ಮನೆಯಲ್ಲಿ ಬಂಧಿಯಾಗಿಸಲಾಗಿದೆ. ನನ್ನ ಸೋದರಿ ಹಾಗೂ ಅವರ ಮಕ್ಕಳನ್ನು ಬಂಧನದಲ್ಲಿಡಲಾಗಿದೆ ಎಂದು ಆರೋಪಿಸಿದರು.
ಇದಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ನಿವಾಸದ ಹೊರಗಡೆ ಪೊಲೀಸ್ ವಾಹನಗಳು ನಿಂತಿರುವ ಚಿತ್ರಗಳನ್ನು ಹಂಚಿದ್ದಾರೆ. ಮನೆಯ ಸಿಬ್ಬಂದಿಗಳನ್ನು ಒಳಗೆ ಬರಲು ಬಿಡುತ್ತಿಲ್ಲ ಎಂದು ಒಮರ್ ಆರೋಪಿಸಿದರು.
ಇದೇನಾ ನಿಮ್ಮ ಪ್ರಜಾಪ್ರಭುತ್ವದ ಹೊಸ ಮಾದರಿ? ಯಾವುದೇ ಕಾರಣವಿಲ್ಲದೆ ಗೃಹಬಂಧನದಲ್ಲಿರಿಸಲಾಗಿದೆ. ಮನೆಯ ಸಿಬ್ಬಂದಿಗಳನ್ನು ಪ್ರವೇಶಿಸಲು ಬಿಡುತ್ತಿಲ್ಲ. ಇದರಿಂದ ತುಂಬಾ ಆಕ್ರೋಶಗೊಂಡಿದ್ದೇನೆ ಎಂದು ಹೇಳಿದರು.
ಇಂದು (ಫೆ.14) ಪುಲ್ವಾಮಾ ದಾಳಿಯ ಎರಡನೇ ವರ್ಷಾಚರಣೆಯಾಗಿದೆ. ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಿಐಪಿಗಳು ಹಾಗೂ ಸಂರಕ್ಷಿತ ವ್ಯಕ್ತಿಗಳ ಚಲನೆಯನ್ನು ತಡೆಯಲಾಗಿದೆ ಎಂದು ಶ್ರೀನಗರ ಪೊಲೀಸರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಒಮರ್, ದಯವಿಟ್ಟು ಯಾವ ಕಾನೂನಿನ ಅಡಿಯಲ್ಲಿ ನನ್ನನ್ನುಗೃಹಬಂಧಿಯಾಗಿಸಲಾಗಿದೆ ಎಂದು ಹೇಳಿ? ಮನೆಯಿಂದ ಹೊರ ಹೋಗದಂತೆ ನೀವು ನನಗೆ ಸಲಹೆ ಮಾಡಬಹುದು. ಆದರೆ ಒತ್ತಾಯಪೂರ್ವಕವಾಗಿ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.