ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಆಘಾತಕಾರಿ ರೀತಿಯಲ್ಲಿ ಏರಿಕೆ ಕಂಡಿದ್ದು, ರಾಜ್ಯದಲ್ಲಿ ಜ.10ರವರೆಗೆ ರಾತ್ರಿ 11 ಗಂಟೆಯಿಂದ ಮುಂಜಾನೆ 5ಗಂಟೆವರೆಗೆ ರಾತ್ರಿ ಕರ್ಫ್ಯೂವನ್ನು ವಿಧಿಸಲಾಗಿದೆ. ಅಲ್ಲದೆ, ಫೆ. 15ರವರೆಗೆ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ.
ಕೋವಿಡ್ ಹರಡುವಿಕೆಯನ್ನು ತಡೆಯಲು ಉದ್ಧವ್ ಠಾಕ್ರೆ ಸರ್ಕಾರವು ಹೊಸ ಮಾರ್ಗಸೂಚಿಗಳನ್ನು ಘೋಷಿಸಿದ್ದು, ಇದರ ಅಡಿಯಲ್ಲಿ ದೊಡ್ಡ ಕೂಟಗಳನ್ನು ನಿರ್ಬಂಧಿಸಲಾಗಿದೆ, ಬ್ಯೂಟಿ ಸಲೂನ್‌ಗಳು, ಕ್ರೀಡಾ ಸಂಕೀರ್ಣಗಳು, ಈಜುಕೊಳಗಳು, ಜಿಮ್‌ಗಳು, ಸ್ಪಾಗಳು ಮತ್ತು ವೆಲ್‌ನೆಸ್ ಕೇಂದ್ರಗಳನ್ನು ಮುಚ್ಚಲಾಗಿದೆ.
ಎರಡೂ ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ.
ಹೊಸ ನಿಯಮಗಳನ್ವಯ, ಚಿತ್ರಮಂದಿಗಳು ಶೇ 50ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬೇಕು ಮತ್ತು ರಾತ್ರಿ 10 ಗಂಟೆಯಿಂದ ಬೆಳಗ್ಗೆ 8ರವರೆಗೆ ಮುಚ್ಚಬೇಕು. ಶಾಪಿಂಗ್ ಮಾಲ್ಸ್, ಮಾರ್ಕೆಟ್ ಸಂಕೀರ್ಣಗಳು ಕೂಡ ಶೇ 50ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬೇಕು ಮತ್ತು ರಾತ್ರಿ 10ಗಂಟೆಯಿಂದ ಬೆಳಗ್ಗೆ 8ರವರೆಗೆ ಮುಚ್ಚಿರಬೇಕೆಂದು ಆದೇಶ ಹೊರಡಿಸಲಾಗಿದೆ.
ಹೊಸ ಆದೇಶದ ಪ್ರಕಾರ, ಮಹಾರಾಷ್ಟ್ರದಲ್ಲಿ ಮನರಂಜನಾ ಉದ್ಯಾನಗಳು, ಮೃಗಾಲಯಗಳು, ವಸ್ತುಸಂಗ್ರಹಾಲಯಗಳು, ಕೋಟೆಗಳು ಮತ್ತು ಇತರ ಟಿಕೆಟ್ ನೀಡುವ ಸ್ಥಳಗಳನ್ನು ಸಾರ್ವಜನಿಕರಿಗೆ ಮುಚ್ಚಲಾಗುತ್ತದೆ.
ರಾಜ್ಯದಲ್ಲಿ ಈವರೆಗೂ ಒಮೈಕ್ರಾನ್ ಪ್ರಕರಣಗಳ ಸಂಖ್ಯೆ 1,009ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 41,434 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದೇ ಅವಧಿಯಲ್ಲಿ 9,671 ಜನರು ಗುಣಮುಖರಾಗಿದ್ದಾರೆ ಮತ್ತು 13 ಜನರು ಸಾವಿಗೀಡಾಗಿದ್ದಾರೆ. ಸದ್ಯ ರಾಜ್ಯದಲ್ಲಿ 1,73,238 ಸಕ್ರಿಯ ಪ್ರಕರಣಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.