ನವದೆಹಲಿ: ಕೊರೊನಾ ವೈರಸ್‌ನ (ಸಾರ್ಸ್ ಕೋವ್–2) ಓಮೈಕ್ರಾನ್ ಹಾಗೂ ಅದರ ಉಪತಳಿಗಳ ಸೋಂಕಿನ ಪ್ರಕರಣಗಳೇ ಭಾರತದಲ್ಲಿ ಹೆಚ್ಚಾಗಿ ಕಂಡುಬಂದಿವೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮಂಗಳವಾರ ಹೇಳಿದೆ.
ಈ ಕುರಿತು ಲಿಖಿತ ಉತ್ತರ ನೀಡಿರುವ ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್, ‘ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಭಾರತೀಯ ವೈರಾಣು ಸಂರಚನೆ ವಿಶ್ಲೇಷಣೆ ಸಂಸ್ಥೆಯು (ಐಎನ್‌ಎಸ್‌ಎಸಿಒಜಿ) ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಿದ್ದು, ಓಮೈಕ್ರಾನ್‌ನ 1,900ಕ್ಕೂ ಹೆಚ್ಚು ಉಪತಳಿಗಳು ಪತ್ತೆಯಾಗಿವೆ’ ಎಂದು ತಿಳಿಸಿದ್ದಾರೆ.
‘ಕೊರೊನಾ ವೈರಸ್ ರೂಪಾಂತರಗೊಳ್ಳುತ್ತಿದ್ದು, ಹಲವಾರು ಉಪತಳಿಗಳು ಕಾಣಿಸಿಕೊಂಡಿವೆ. ಇವುಗಳ ಸೋಂಕಿನ ಪ್ರಸರಣ ಹಾಗೂ ಆರೋಗ್ಯದ ಮೇಲಾಗುವ ಪರಿಣಾಮ ಪತ್ತೆ ಹಚ್ಚುವ ಸಲುವಾಗಿ ಐಎನ್‌ಎಸ್‌ಎಸಿಒಜಿ ಪ್ರಯೋಗಾಲಯಗಳು ವೈರಸ್‌ನ ಸಂರಚನಾ ವಿಶ್ಲೇಷಣೆ ನಡೆಸುತ್ತಿವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
‘ವಿದೇಶಗಳಿಂದ ಭಾರತಕ್ಕೆ ಬರುವ ಒಟ್ಟು ಪ್ರಯಾಣಿಕರ ಪೈಕಿ ಶೇ 2ರಷ್ಟು ಮಂದಿಯನ್ನು ಇಲ್ಲಿಗೆ ಬಂದ ನಂತರ ಕೋವಿಡ್–19 ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕೋವಿಡ್ ದೃಢಪಡುವಿಕೆ ಹಾಗೂ ವೈರಸ್‌ನ ಯಾವ ತಳಿಯಿಂದಾಗಿ ಕೋವಿಡ್ ಕಾಣಿಸಿಕೊಂಡಿದೆ ಎಂಬುದರ ಮೇಲೆ ಕಣ್ಗಾವಲಿರಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.