ನವದೆಹಲಿ (ಪಿಟಿಐ): ಬಿಜೆಪಿ ಸಂಸದರು ತಮ್ಮನ್ನು ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.ಏಪ್ರಿಲ್ 7ರಿಂದ ಬಿಜೆಪಿಯು 15 ದಿನಗಳ 'ಸಾಮಾಜಿಕ ನ್ಯಾಯ ಪಾಕ್ಷಿಕ' ಕಾರ್ಯಕ್ರಮ ನಡೆಸಲಿರುವ ಹಿನ್ನೆಲೆಯಲ್ಲಿ ಸಂಸದರು ಪ್ರತಿದಿನ ಏನೆಲ್ಲಾ ಚಟುವಟಿಕೆಗಳಲ್ಲಿ ತೊಡಗಬೇಕು ಎಂಬುದರ ಬಗ್ಗೆ ಮೋದಿ ಅವರು ಸೂಚನೆ ನೀಡಿದ್ದಾರೆ.
ಬಿಜೆಪಿ ಸಂಸ್ಥಾಪನಾ ದಿನದ ಸಿದ್ಧತೆಗಾಗಿ ಮಂಗಳವಾರ ಇಲ್ಲಿ ಕರೆಯಲಾದ ಬಿಜೆಪಿಯ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದ ವಿವಿಧ ವರ್ಗಗಳಿಗಾಗಿ ಕೇಂದ್ರ ಸರ್ಕಾರ ರೂಪಿಸಿದ ಎಲ್ಲಾ ಯೋಜನೆಗಳ ಮಾಹಿತಿಗಳನ್ನು ಜನರಿಗೆ ಒದಗಿಸಬೇಕು. ಏಪ್ರಿಲ್ 12ರಂದು ಕೋವಿಡ್ ಲಸಿಕೆ ಯೋಜನೆ ಬಗ್ಗೆ ಜನರಿಗೆ ತಿಳಿಸಬೇಕು. ಜೊತೆಗೆ ಶಾಲೆಗಳಿಗೆ ಖುದ್ದು ಸಂಸದರು ಭೇಟಿ ನೀಡಿ, ಲಸಿಕೆ ಪಡೆಯಲು ಉತ್ತೇಜಿಸಬೇಕು ಎಂದು ಸೂಚಿಸಿದರು. ಏಪ್ರಿಲ್ 6 ಬಿಜೆಪಿಯ ಸಂಸ್ಥಾಪನಾ ದಿನವಾಗಿದೆ.
ಸಭೆಯ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಸಂಸದೀಯ ಸಚಿವ ಪ್ರಲ್ಹಾದ ಜೋಶಿ, 'ಎಲ್ಲಾ ಸಂಸದರು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಬೇಕು ಹಾಗೂ ತಮ್ಮನ್ನು ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮೋದಿ ಅವರು ಸೂಚಿಸಿದ್ದಾರೆ. ಸಂಸದರಿಗೆ ಕಿತ್ತಳೆ ಬಣ್ಣದ ಟೋಪಿಯನ್ನು ನೀಡಲಾಗುತ್ತದೆ. ಅದರಲ್ಲಿ ಪಕ್ಷದ ಚಿಹ್ನೆ ಅಥವಾ ಹೆಸರು ಅಥವಾ ಪ್ರಧಾನಿ ಮೋದಿ ಅವರ ಫೋಟೋ ಇರಲಿದೆ' ಎಂದು ಮಾಹಿತಿ ನೀಡಿದರು.
ಸಂಸದರು ಏಪ್ರಿಲ್ 7ರಂದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಆಯುಷ್ಮಾನ್ ಭಾರತ್ ಮತ್ತು ಜನ ಔಷಧಿ ಕೇಂದ್ರಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಏಪ್ರಿಲ್ 8 ಮತ್ತು 9 ರಂದು ಬಡವರಿಗಾಗಿ ಸೂರು ನಿರ್ಮಾಣ ಮತ್ತು ಪ್ರತಿ ಮನೆಗಳಿಗೂ ನಲ್ಲಿ ನೀರು ಪೂರೈಸುವ ಯೋಜನೆ ಬಗ್ಗೆ ವಿವರಿಸಲಿದ್ದಾರೆ. ಸಾಮಾಜಿಕ ಸುಧಾರಕರಾದ ಜ್ಯೋತಿರಾವ್ ಫುಲೆ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ದೊಡ್ಡ ಮಟ್ಟದಲ್ಲಿ ಆಚರಿಸಲಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.