ನವದೆಹಲಿ: ಅಂದಾಜು 6,000 ಎನ್‌ಜಿಒಗಳ (ಸ್ವಯಂ ಸೇವಾ ಸಂಸ್ಥೆ) ವಿದೇಶಿ ದೇಣಿಗೆ ಸಂಗ್ರಹ ಪರವಾನಗಿಯನ್ನು ನವೀಕರಿಸದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
‘ಆ ಎನ್‌ಜಿಒಗಳು ಅಂತಿಮ ಕಾಲಾವಧಿಯಲ್ಲಿ ನವೀಕರಣ ಕೋರಿ ಅರ್ಜಿ ಸಲ್ಲಿಸದಿದ್ದರೆ, ಅವರಿಗೆ ದೇಣಿಗೆ ಸಂಗ್ರಹ
ದಲ್ಲಿ ಆಸಕ್ತಿ ಇಲ್ಲ ಎಂದೇ ಭಾವಿಸಲಾಗುತ್ತದೆ’ ಎಂದು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್, ದಿನೇಶ್
ಮಾಹೇಶ್ವರಿ ಹಾಗೂ ಸಿ.ಟಿ. ರವಿಕುಮಾರ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ಅರ್ಜಿ ಸಲ್ಲಿಸಿರುವ ಅಮೆರಿಕ ಮೂಲದ ಗ್ಲೋಬಲ್ ಪೀಸ್ ಇನಿಶಿಯೇಟಿವ್ ಸಂಸ್ಥೆಯ ಪರ ವಕೀಲ ಸಂಜಯ್ ಹೆಗ್ಡೆ, ಈ ಎನ್‌ಜಿಒಗಳು ಭಾರತದ ಲಕ್ಷಾಂತರ ಜನರಿಗೆ ನೆರವು ನೀಡುತ್ತಿದ್ದು, ವಿದೇಶಿ ದೇಣಿಗೆ ಸಂಗ್ರಹ ಪರವಾನಗಿ ರದ್ದುಗೊಳಿಸಿದ್ದರಿಂದ ಕೋವಿಡ್– 19 ಸಂದರ್ಭದಲ್ಲಿ ಅಗತ್ಯ ನೆರವು ನೀಡುವುದಕ್ಕೆ ಹಿನ್ನಡೆ ಉಂಟಾಗಿದೆ ಎಂದು ವಾದ ಮಂಡಿಸಿದರು.
ಇದಕ್ಕೆ ಕೇಂದ್ರದ ಪರ ಪ್ರತಿಕ್ರಿಯೆ ನೀಡಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 11,000ಕ್ಕೂ ಅಧಿಕ ಎನ್‌ಜಿಒಗಳು ಅಂತಿಮ ಗಡುವಿನೊಳಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಅಡಿ ಪರವಾನಗಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿ ಈಗಾಗಲೇ ಅನುಮತಿ ಪಡೆದುಕೊಂಡಿವೆ ಎಂದು ಪೀಠಕ್ಕೆ ತಿಳಿಸಿದರು.
‘ಸರ್ಕಾರಕ್ಕೆ ಈ ಸಂಸ್ಥೆಗಳ ಬಗ್ಗೆ ಮಾಹಿತಿ ಇದೆ. ಆದರೆ, ಅರ್ಜಿ ಸಲ್ಲಿಸದೇ ನವೀಕರಣ ಕೋರಿ ಪಿಐಎಲ್ಸಲ್ಲಿಸಿರುವುದರ ಹಿಂದಿನ ಉದ್ದೇಶ ಏನು ಎಂಬುದು ತಿಳಿಯದಾಗಿದೆ’ ಎಂದ ಮೆಹ್ತಾ, ‘ಅಮೆರಿಕದ ಹ್ಯೂಸ್ಟನ್ ಮೂಲದ ವ್ಯಕ್ತಿಗೆ ಛತ್ತೀಸ್‌ಗಢದ ಬಗ್ಗೆ ಏಕೆ ಆಸಕ್ತಿ
ಎಂಬುದೇ ಕುತೂಹಲ ಮೂಡಿಸಿದೆ’ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.