ADVERTISEMENT

ಲೋಕೋಪಯೋಗಿ ಇಲಾಖೆಯ ರಸ್ತೆ ನಿರ್ವಹಣೆಯನ್ನು ಬಿಜೆಪಿ ತಡೆದಿದೆ: ಕೇಜ್ರಿವಾಲ್ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಅಕ್ಟೋಬರ್ 2024, 6:36 IST
Last Updated 7 ಅಕ್ಟೋಬರ್ 2024, 6:36 IST
<div class="paragraphs"><p>ಅರವಿಂದ ಕೇಜ್ರಿವಾಲ್</p></div>

ಅರವಿಂದ ಕೇಜ್ರಿವಾಲ್

   

ಪಿಟಿಐ ಚಿತ್ರ

ನವದೆಹಲಿ: ಆಮ್‌ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ದೆಹಲಿ ರಸ್ತೆಗಳ ಸ್ಥಿತಿ ಕುರಿತು ಮಾತನಾಡಿದ್ದಾರೆ.

ADVERTISEMENT

'ಲೋಕೋಪಯೋಗಿ ಇಲಾಖೆಯು (ಪಿಡಬ್ಲ್ಯುಡಿ) ನಿಯಮಿತವಾಗಿ ನಡೆಸುವ ರಸ್ತೆಗಳ ನಿರ್ವಹಣೆಯನ್ನು ಬಿಜೆಪಿ ತಡೆದಿದೆ' ಎಂದು ಕೇಜ್ರಿವಾಲ್‌ ಆರೋಪಿಸಿದ್ದಾರೆ.

ಈ ಕುರಿತು 'ಎಎನ್‌ಐ' ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.

'ಪಿಡಬ್ಲ್ಯುಡಿ ರಸ್ತೆಗಳ ಸ್ಥಿತಿ ಕುರಿತು ಮುಖ್ಯಮಂತ್ರಿ ಆತಿಶಿ ಅವರಿಗೆ ಪತ್ರ ಬರೆದಿದ್ದೆ. ಇದೀಗ ಅವರೊಂದಿಗೆ ರಸ್ತೆಗಳ ಪರಿಶೀಲಿಸಿದ್ದೇನೆ. ನಮ್ಮ ಶಾಸಕರು ಮತ್ತು ಪಕ್ಷದ ಮುಖಂಡರು ಹಾನಿಗೊಳಗಾಗಿರುವ ರಸ್ತೆಗಳು ಹಾಗೂ ಅಗತ್ಯ ದುರಸ್ತಿ ಕುರಿತು ಪರಿಶೀಲನೆ ನಡೆಸುತ್ತಿರುವುದು ಖುಷಿ ತಂದಿದೆ' ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಹಾನಿಯಾಗಿದ್ದ ರಸ್ತೆ ಪರಿಶೀಲನೆಗಾಗಿ ಆತಿಶಿ ಅವರೊಂದಿಗೆ ಇತ್ತೀಚೆಗೆ ದೆಹಲಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ಕೇಜ್ರಿವಾಲ್‌, ರಾಷ್ಟ್ರ ರಾಜಧಾನಿಯಲ್ಲಿನ ಎಲ್ಲ ಪಿಡಬ್ಲ್ಯುಡಿ ರಸ್ತೆಗಳನ್ನು ಮೂರ್ನಾಲ್ಕು ದಿನಗಳಲ್ಲಿ ಪರಿಶೀಲಿಸುವಂತೆ ಒತ್ತಾಯಿಸಿದ್ದರು. ಹಾಗೆಯೇ, ಎಲ್ಲ ಶಾಸಕರು ಮತ್ತು ಸಚಿವರೂ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದ್ದರು. ಅದೇ ವೇಳೆ, 'ನಾನು ಜೈಲಿನಲ್ಲಿದ್ದ ಕಾರಣ, ಎಲ್ಲ ಕೆಲಸಗಳನ್ನು ನಿಲ್ಲಿಸಲಾಗಿದೆ. ಇದೀಗ ಎಲ್ಲವನ್ನೂ ಪುನರಾರಂಭಿಸುವುದಾಗಿ ಜನರಿಗೆ ಭರವಸೆ ನೀಡುತ್ತೇನೆ' ಎಂದು ಹೇಳಿದ್ದರು.

ದೆಹಲಿ ಸರ್ಕಾರ ಸದ್ಯ ಹಿಂಪಡೆದಿರುವ 'ಅಬಕಾರಿ ನೀತಿ' ಜಾರಿ ವೇಳೆ ನಡೆದಿದೆ ಎನ್ನಲಾದ ಹಣದ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಕೇಂದ್ರೀಯ ತನಿಖಾ ದಳವು (ಸಿಬಿಐ) ಕೇಜ್ರಿವಾಲ್‌ ಅವರನ್ನು ಬಂಧಿಸಿತ್ತು. ಜಾಮೀನಿನ ಮೇಲೆ ತಿಹಾರ್‌ ಜೈಲಿನಿಂದ ಹೊರಬಂದ ಬಳಿಕ ಕೇಜ್ರಿವಾಲ್‌ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದರು.

ಬಳಿಕ ಶಾಸಕಾಂಗ ಪಕ್ಷದ ಸಭೆ ನಡೆಸಿ, ತಮ್ಮ ಉತ್ತರಾಧಿಕಾರಿಯಾಗಿ ಸಚಿವೆ ಆತಿಶಿ ಅವರ ಹೆಸರನ್ನು ಘೋಷಿಸಿದ್ದರು. ನಿರ್ಗಮಿತ ಮುಖ್ಯಮಂತ್ರಿಯ ನಿರ್ಧಾರವನ್ನು ಪಕ್ಷವು ಸರ್ವಾನುಮತದಿಂದ ಅಂಗೀಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.