ಉತ್ತರಕಾಶಿ: ‘ಒಮ್ಮೆ ಸುರಂಗದಿಂದ ನನ್ನ ಮಗ ಹೊರಗೆ ಬಂದರೆ ಸಾಕು, ಮತ್ತೆ ಇಲ್ಲಿ ಕೆಲಸ ಮಾಡಲು ಬಿಡುವುದಿಲ್ಲ’ ಎಂದು ಸುರಂಗದೊಳಗೆ ಸಿಲುಕಿಕೊಂಡಿರುವ ಕಾರ್ಮಿಕ ಮಂಜೀತ್ ಅವರ ತಂದೆ ಕಣ್ಣೀರು ಸುರಿಸಿದ್ದಾರೆ.
ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದೊಳಗೆ 14 ದಿನಗಳಿಂದ ಸಿಲುಕಿಕೊಂಡಿರುವ 41 ಕಾರ್ಮಿಕರ ಕುಟುಂಬಸ್ಥರು ತಮ್ಮವರಿಗಾಗಿ ಕಾಯುತ್ತಾ ಕುಳಿತಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಒಂದಾಲ್ಲೊಂದು ತೊಡಕುಗಳು ಕಾಣಿಸಿಕೊಳ್ಳುತ್ತಿದ್ದು, ಕುಟುಂಬಸ್ಥರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
ಉತ್ತರ ಪ್ರದೇಶದ ಲಖಿಂಪುರ ಖೇರಿಯ ರೈತ ಚೌಧರಿ ಅವರ ಮಗ ಮಂಜೀತ್ ಸುರಂಗದೊಳಗೆ ಸಿಲುಕಿಕೊಂಡ ಕಾರ್ಮಿಕರಲ್ಲಿ ಒಬ್ಬರಾಗಿದ್ದಾರೆ. ಚೌಧರಿಯವರ ಇಬ್ಬರು ಮಕ್ಕಳಲ್ಲಿ ಒಬ್ಬ ಮಗ ಮುಂಬೈನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದು, ಇದೀಗ ಇನ್ನೊಬ್ಬ ಮಗ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾನೆ.
‘ಮಂಜೀತ್ ಒಬ್ಬನೇ ನಮಗೀಗ ಆಸರೆ. ಅವನಿಗೆ ಏನಾದರೂ ಸಂಭವಿಸಿದರೆ ನಾನು ಮತ್ತು ನನ್ನ ಹೆಂಡತಿ ಹೇಗೆ ಬದುಕುವುದು?’ ಎಂದು ತಂದೆ ಚೌಧರಿ ಕಣ್ಣೀರಾಗಿದ್ದಾರೆ.
‘ಇಂದು(ಭಾನುವಾರ) ನಾನು ನನ್ನ ಮಗನೊಂದಿಗೆ ಮಾತನಾಡಿದ್ದೇನೆ. ಅವನು ಗೆಲುವಾಗಿರುವುದನ್ನು ಕಂಡು ಸ್ವಲ್ಪ ಸಮಾಧಾನವಾಗಿದೆ. ಇದೊಂದು ಯುದ್ಧ, ಇದಕ್ಕೆ ಹೆದರಬೇಡ ಎಂದು ಕಿವಿಮಾತು ಹೇಳಿದ್ದೇನೆ. ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿರುವುದು ನನ್ನಲ್ಲಿ ಸ್ವಲ್ಪ ಭಯ ಮೂಡಿಸಿದೆ’ ಎಂದು ಸುದ್ದಿಗಾರರಿಗೆ ಹೇಳಿದ್ದಾರೆ.
‘ನಾವು ಕಡು ಬಡವರಾಗಿದ್ದು, ಇಲ್ಲಿಗೆ ಬರಲು ನಮ್ಮ ಬಳಿ ಹಣವಿರಲಿಲ್ಲ. ನನ್ನ ಹೆಂಡತಿ ಚಿನ್ನವನ್ನು ಅಡವಿಟ್ಟು ₹9 ಸಾವಿರ ಸಾಲ ಪಡೆದು ಬರಬೇಕಾಯಿತು. ಇಲ್ಲಿಗೆ ಬಂದ ಮೇಲೆ ಜಾಕೆಟ್ ಮತ್ತು ಶೂಗಳನ್ನು ನೀಡಿದ್ದಾರೆ. ನನ್ನ ಸಾಲವನ್ನು ವಾಪಾಸ್ ಮಾಡಿದ್ದಾರೆ’ ಎಂದು ಹೇಳಿದರು.
ಬ್ರಹ್ಮಖಾಲ್-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯಾರಾ ಮತ್ತು ದಾಂಡಲ್‌ಗಾಂವ್ ನಡುವೆ ನಿರ್ಮಾಣ ಹಂತದಲ್ಲಿದ್ದ ಸುರಂಗ ನ.12ರಂದು ಕುಸಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.