ADVERTISEMENT

ಶಿವಸೈನಿಕನೊಬ್ಬ ಭವಿಷ್ಯದಲ್ಲಿ ಮಹಾರಾಷ್ಟ್ರದ ಸಿಎಂ ಆಗಲಿದ್ದಾನೆ: ಉದ್ಧವ್‌ ಠಾಕ್ರೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2019, 13:59 IST
Last Updated 7 ಅಕ್ಟೋಬರ್ 2019, 13:59 IST
   

ಮುಂಬೈ: ‘ನನ್ನ ಮಗ ಗೆದ್ದ ಮೊದಲಿಗೆ ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಆಗಲಿದ್ದಾನೆ ಎಂಬುದೆಲ್ಲ ಸುಳ್ಳು. ಆದರೆ, ಭವಿಷ್ಯದಲ್ಲಿ ಶಿವ ಸೈನಿಕನೊಬ್ಬ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಲಿದ್ದಾನೆ,’ ಎಂದು ಶಿವ ಸೇನೆಯ ಮುಖ್ಯಸ್ಥ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ಶಿವಸೇನೆಯ ಮುಖವಾಣಿ ‘ಸಾಮ್ನ’ದ ಸಂದರ್ಶನದಲ್ಲಿ ಮಾತನಾಡಿರುವ ಅವರು ತಮ್ಮ ಪುತ್ರ ಆದಿತ್ಯ ಠಾಕ್ರೆ ಸ್ಪರ್ಧೆ, ತಮ್ಮ ರಾಜಕೀಯದ ನಡೆಗಳು, ಮೈತ್ರಿ ರಾಜಕಾರಣದ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ದಾರೆ.

‘ಇದೇ ಮೊದಲ ಬಾರಿಗೆ ಚುನಾವಣೆಗೆ ಆದಿತ್ಯ ಚುನಾವಣೆ ಸ್ಪರ್ಧೆ ಮಾಡುತ್ತಿದ್ದಾನೆ. ಆದ ಮಾತ್ರಕ್ಕೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯಲಿದ್ದೇನೆ ಎಂದಲ್ಲ. ಅತ ಮುಖ್ಯಮಂತ್ರಿಯಾಗುವ ಅಥವಾ ಉಪ ಮುಖ್ಯಮಂತ್ರಿಯಾಗಬೇಕೆಂಬ ಆಸೆಯನ್ನೇನೂ ಇಟ್ಟುಕೊಂಡಿಲ್ಲ. ಅತನಿಗೆ ಸಂಸದೀಯ ವ್ಯವಸ್ಥೆಯ ಅನುಭವ ಪಡೆಯಬೇಕೆಂಬ ಹಂಬಲವಿದೆ,’ ಎಂದು ಹೇಳಿದ್ದಾರೆ.

ADVERTISEMENT

‘ಅದರೆ, ಮುಂದೊಂದು ದಿನ ಶಿವ ಸೇನೆಯ ನಾಯಕನೊಬ್ಬ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಲಿದ್ದಾನೆ,’ ಎಂದು ಉದ್ಧವ್‌ ಠಾಕ್ರೆ ಹೇಳಿಕೊಂಡಿದ್ದಾರೆ.

‘ಮುಂದೊಂದು ದಿನ ಶಿವ ಸೈನಿಕನೊಬ್ಬ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಲಿದ್ದಾನೆ. ಇದು ಶಿವಸೇನೆಯನ್ನು ಹುಟ್ಟುಹಾಕಿದ ನನ್ನ ತಂದೆ ಬಾಳಾಸಾಹೇಬ್‌ (ಬಾಳಾ ಠಾಕ್ರೆ) ಅವರಿಗೆ ನಾನು ನೀಡುವ ವಾಗ್ದಾನ,’ ಎಂದು ಅವರು ಹೇಳಿಕೊಂಡಿದ್ದಾರೆ.

ಶಿವಸೇನೆಯನ್ನು ಸ್ಥಾಪಿಸಿದ ಬಾಳಾ ಠಾಕ್ರೆ ಅವರ ಮೊಮ್ಮಗ, ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಅವರು ಮಹಾರಾಷ್ಟ್ರದ ವ್ರೋಲಿ ವಿಧಾನಸಭೆ ಕ್ಷೇತ್ರದಿಂದ ಇದೇ ಮೊದಲಿಗೆ ಸ್ಪರ್ಧೆ ಮಾಡುವ ಮೂಲಕ ರಾಜಕೀಯದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಇನ್ನು, ಬಿಜೆಪಿ ಜತೆಗಿನ ಮೈತ್ರಿ ಕುರಿತು ಸಂದರ್ಶನದಲ್ಲಿ ಹೆಚ್ಚೇನೂ ಮಾತನಾಡದ ಉದ್ಧವ್‌ ಠಾಕ್ರೆ, ಮುಂದಿನ ಸರ್ಕಾರದಲ್ಲಿ ಸಮಪಾಲು ಪಡೆಯುವ ನಿರೀಕ್ಷೆ ಹೊಂದಿರುವುದಾಗಿ ತಿಳಿಸಿದ್ದಾರೆ.

ಶಿವ ಸೇನೆಯ ನಾಯಕನೊಬ್ಬ ಮುಖ್ಯಮಂತ್ರಿಯಾಗಲಿದ್ದಾನೆ ಎಂಬ ಉದ್ಧವ್‌ ಠಾಕ್ರೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌, ‘ಉದ್ಧವ್‌ ಠಾಕ್ರೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅವರ ಅಭಿಪ್ರಾಯದಲ್ಲಿ ನನಗೇನೂ ತಪ್ಪು ಕಾಣಲಿಲ್ಲ,’ ಎಂದಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಬಿಜೆಪಿ ಮತ್ತು ಶಿವಸೇನೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ಮಹಾರಾಷ್ಟ್ರ ವಿಧಾನಸಭೆಯ ಒಟ್ಟು 288 ಸ್ಥಾನಗಳ ಪೈಕಿ ಶಿವಸೇನೆ 124 ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿದ್ದು, ಬಿಜೆಪಿ ತನ್ನ ಇತರ ಮಿತ್ರಪಕ್ಷಗಳಾದ ಆರ್‌ಪಿಐ, ಆರ್‌ಎಸ್‌ಪಿ ಜತೆ ಸೇರಿ 150+14 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ.

ವಿಧಾನಸಭೆಯ ಒಟ್ಟು ಸ್ಥಾನಗಳ ಪೈಕಿ ಶೇ. 50ರಷ್ಟು ಸ್ಥಾನಗಳು ತನಗೆ ಬೇಕು ಎಂದು ಈ ಮೊದಲು ಪಟ್ಟು ಹಿಡಿದಿದ್ದ ಶಿವಸೇನೆ ಮುಖ್ಯಮಂತ್ರಿ ಪಟ್ಟದ ಮೇಲೂ ಕಣ್ಣಿಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.