ಪಿಟಿಐ
ತಿರುವನಂತಪುರ: ಇಲ್ಲಿನ ಮುದಲಪೋಯಿನಲ್ಲಿ ಸೋಮವಾರ ಮುಂಜಾನೆ ಬೋಟ್ ಮುಳುಗಿ ಮೀನುಗಾರರೊಬ್ಬರು ಮೃತಪಟ್ಟು, ಮೂವರು ಕಾಣೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪರಿಶೀಲನೆಗೆ ಘಟನಾ ಸ್ಥಳಕ್ಕೆ ಆಗಮಿಸಿದ್ದ ಸಚಿವರ ವಿರುದ್ಧ ಕೆಲ ಸ್ಥಳೀಯರು ಪ್ರತಿಭಟನೆ ನಡೆಸಿದ್ದರಿಂದ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಮುದಲಪೋಯಿಯಲ್ಲಿ ನದಿ ಮತ್ತು ಸರೋವರದ ನೀರು ಅರಬ್ಬೀ ಸಮುದ್ರವನ್ನು ಸೇರುತ್ತದೆ.
ಶಿಕ್ಷಣ ಸಚಿವ ವಿ.ಶಿವನಕುಟ್ಟಿ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಿ.ಆರ್.ಅನಿಲ್ ಮತ್ತು ಸಾರಿಗೆ ಸಚಿವ ಆಂಥೋನಿ ರಾಜು ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕೆಲವು ಸ್ಥಳೀಯರು, ರಕ್ಷಣಾ ಕಾರ್ಯಾಚರಣೆಗೆ ವಿಳಂಬ ಮಾಡಲಾಗಿದೆ ಮತ್ತು ಸಮುದ್ರದಾಳಕ್ಕೆ ಇಳಿಯುವ ಮೀನುಗಾರರ ಸುರಕ್ಷತೆಗೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ‘ಅವೈಜ್ಞಾನಿಕ ಬ್ರೇಕ್‌ವಾಟರ್’ ನಿರ್ಮಿಸುತ್ತಿರುವುದರಿಂದ ಬೋಟ್ ಅವಘಡಗಳು ಸರ್ವೇ ಸಾಮಾನ್ಯವಾಗಿದ್ದು, ಈಗಾಗಲೇ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
‘ಸಚಿವರು ಹೋಗುವ ಮಾರ್ಗಕ್ಕೆ ಅಡ್ಡಲಾಗಿ ನಿಂತುಕೊಳ್ಳಿ ಎಂದು ಲ್ಯಾಟಿನ್ ಕ್ಯಾಥೋಲಿಕ್ ಚರ್ಚ್ ಪಾದ್ರಿಯೊಬ್ಬರು ಜನರಿಗೆ ಕರೆ ನೀಡಿ, ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ಸೃಷ್ಟಿಸಲು ಯತ್ನಿಸಿದರು. ಆದರೆ ಜನರು ಅವರ ಮಾತಿಗೆ ಕಿವಿಗೊಡಲಿಲ್ಲ’ ಎಂದು ಶಿವನಕುಟ್ಟಿ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಪ್ರತಿಭಟನಕಾರರ ಎಲ್ಲ ಆರೋಪಗಳನ್ನೂ ತಳ್ಳಿಹಾಕಿದ ಅವರು, ‘ಜಿಲ್ಲಾಡಳಿತ ಕಾಣೆಯಾದ ಮೀನುಗಾರರ ಹುಡುಕಾಟಕ್ಕೆ ಅಗತ್ಯ ಕ್ರಮ ಕೈಗೊಂಡಿದೆ. ಕರಾವಳಿ ಪಡೆ, ಸ್ಥಳೀಯ ಪೊಲೀಸರು ಮುಂಜಾನೆಯಿಂದಲೇ ಶೋಧ ನಡೆಸುತ್ತಿದ್ದಾರೆ’ ಎಂದು ತಿಳಿಸಿದರು.
ಸಚಿವ ಶಿವನಕುಟ್ಟಿ ಅವರ ಆರೋಪವನ್ನು ಪಾದ್ರಿ ನಿರಾಕರಿಸಿದ್ದಾರೆ.
ಕುಂಜುಮೊನ್ (42) ಅವರ ಮೃತದೇಹವನ್ನು ಹೊರತೆಗೆಯಲಾಗಿದೆ. ಇನ್ನು ಮೂವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.